ದೇವದುರ್ಗ: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ನವೆಂಬರ್ 7ರಂದು ತಾಲೂಕಿನ ಗಬೂರು ಗ್ರಾಮದಲ್ಲಿ ‘ಪ್ರಜಾಸೇವೆ ಆಂದೋಲನ – ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಗಬೂರು ಹೋಬಳಿಯ ಗಬೂರು ಗ್ರಾಮದ ನಾಡಕಚೇರಿ ಆವರಣದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಸಮಸ್ಯೆಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಧ್ಯವಿರುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಮೂಲಕ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕುಂದುಕೊರತೆಗಳು ಹಾಗೂ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಸ್ಪಷ್ಟವಾಗಿ ನಮೂದಿಸಿ ಲಿಖಿತ ಅರ್ಜಿಗಳ ರೂಪದಲ್ಲಿ ಸಲ್ಲಿಸಬೇಕು. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಹವಾಲುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಗಬೂರು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸರ್ಕಾರದ ಈ ಜನಸ್ನೇಹಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



