ದೇವದುರ್ಗ: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನದ ಜೊತೆಗೆ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಾಹಿತ್ಯದ ಓದು ಮಕ್ಕಳಲ್ಲಿ ಏಕಾಗ್ರತೆ, ಕಲ್ಪನಾಶಕ್ತಿ ಹಾಗೂ ಸೃಜನಶೀಲತೆಯನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಮಕ್ಕಳ ಸಾಹಿತಿ ಹಾಗೂ ಕಾವ್ಯ ಕಮ್ಮಟದ ನಿರ್ದೇಶಕ ಶಂಕರ ದೇವರು ಹಿರೇಮಠ ಹೇಳಿದರು.
ತಾಲೂಕಿನ ಮಸರಕಲ್ ಗ್ರಾಮದ ಶ್ರೀ ಮುರುಘೇಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಮಕ್ಕಳ ಕಾವ್ಯ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯ ಸಾಹಿತಿಗಳು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಜಿಲ್ಲೆಯ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಕವಿತೆ, ಕಥೆ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಓದುವ ಮೂಲಕ ತಮ್ಮಲ್ಲಿರುವ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಮ್ಮಟವನ್ನು ಉದ್ಘಾಟಿಸಿದ ಶಾಲೆಯ ಮುಖ್ಯಗುರು ರವಿಶಂಕರ ಮಾತನಾಡಿ, ಮಕ್ಕಳು ತರಗತಿಯ ಕಲಿಕೆಗೆ ಮಾತ್ರ ಸೀಮಿತವಾಗದೆ ಸಾಹಿತ್ಯ ಕೃತಿಗಳ ಅಧ್ಯಯನ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕಾವ್ಯ ವಾಚನ, ಕನ್ನಡದ ಪ್ರಸಿದ್ಧ ಸಾಹಿತಿಗಳ ಕೃತಿಗಳ ಓದು ಮತ್ತು ಸಾಹಿತ್ಯ ಕಮ್ಮಟಗಳಲ್ಲಿ ಪಾಲ್ಗೊಳ್ಳುವುದರಿಂದ ಭಾಷಾ ಪ್ರೌಢಿಮೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಕಮ್ಮಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕವಿತೆ ರಚನೆಯ ವಿಧಾನ, ವಿಷಯದ ಆಯ್ಕೆ, ಕಾವ್ಯದ ವಿನ್ಯಾಸ ಹಾಗೂ ಸೃಜನಶೀಲ ಬರವಣಿಗೆಯ ಕುರಿತು ಮಾರ್ಗದರ್ಶನ ನೀಡಲಾಯಿತು. ವಿದ್ಯಾರ್ಥಿಗಳು ತಾವು ರಚಿಸಿದ ಸ್ವರಚಿತ ಕವಿತೆಗಳನ್ನು ವಾಚಿಸುವ ಮೂಲಕ ತಮ್ಮ ಸಾಹಿತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ ನೀಲಕಂಠ ಮಳಿಮಠ, ಮೈನುದ್ದೀನ್, ಅಭಿಷೇಕ್ ಬಳೆ ಹಾಗೂ ಅಭಿಷೇಕ ಸ್ವಾಮಿ ಭಾಗವಹಿಸಿ ಮಕ್ಕಳ ಸಾಹಿತ್ಯದ ಹಿನ್ನೆಲೆ, ಸಾಹಿತ್ಯ ರಚನೆಯ ವಿಧಾನಗಳು, ಸೃಜನಶೀಲ ಬರವಣಿಗೆ, ಮಕ್ಕಳ ಸಾಹಿತ್ಯ ಪತ್ರಿಕೆಗಳ ಪಾತ್ರ ಹಾಗೂ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಅಗತ್ಯದ ಕುರಿತು ವಿವಿಧ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಕಮ್ಮಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಸಾಹಿತ್ಯ ಕೃತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಪ್ರಿಯಾಂಕಾ ಮತ್ತು ಫಾತಿಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ ಪಾಟೀಲ, ಗಿರಿಯಪ್ಪ, ಶಾಂತಪ್ಪ, ಶಕೀಲ್ ಅಹಮದ್, ಸೋಫಿ ಸಾಬ್, ಶೇಖ್ ಅಲಿ, ನಾಗರಾಜ ಹಾಗೂ ನಾಗರತ್ನ ಉಪಸ್ಥಿತರಿದ್ದರು.



