ರಾಯಚೂರು: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸಂಘದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 75 ವಸಂತಗಳನ್ನು ಪೂರೈಸಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ದಾನಮ್ಮ ಸುಭಾಶ್ಚಂದ್ರ ಅವರು ರಾಜ್ಯಮಟ್ಟದ ಅಭಿನಂದನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆ.30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನದ ಜೊತೆಗೆ, 75 ವರ್ಷಗಳನ್ನು ಪೂರೈಸಿರುವ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕ ಶಿಕ್ಷಕರನ್ನು ಅಭಿನಂದಿಸಲಾಗುತ್ತಿದ್ದು, ಈ ಸಾಲಿನಲ್ಲಿ ದಾನಮ್ಮ ಸುಭಾಶ್ಚಂದ್ರ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತಿದೆ.
ಶಿಕ್ಷಕ ವೃತ್ತಿಯಲ್ಲಿ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ ಹಾಗೂ ಕಾಯಕಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸಿರುವ ದಾನಮ್ಮ ಸುಭಾಶ್ಚಂದ್ರ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಾದ ಸಮಸ್ಯೆಗಳಿಗೆ ಎದೆಗುಂದದೆ ಪರಿಹಾರ ಕಂಡುಕೊಳ್ಳುವ ಮೂಲಕ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಹಿಂದೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ಅವರ ವೃತ್ತಿಜೀವನದ ಪ್ರಮುಖ ಸಾಧನೆಯಾಗಿದೆ.
ನಿವೃತ್ತಿಯ ನಂತರವೂ ದಾನಮ್ಮ ಸುಭಾಶ್ಚಂದ್ರ ಅವರು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಂದ ದೂರ ಉಳಿಯದೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಸೂಕ್ತ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡುತ್ತಾ ಸಮಾಜಮುಖಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
75 ವಸಂತಗಳನ್ನು ಪೂರೈಸಿದ್ದರೂ ಅವರಲ್ಲಿರುವ ಉತ್ಸಾಹ, ಕ್ರಿಯಾಶೀಲತೆ ಹಾಗೂ ಸೇವಾ ಮನೋಭಾವ ಯುವಪೀಳಿಗೆಗೂ ಪ್ರೇರಣೆಯಾಗಿದೆ. ರಾಜ್ಯಮಟ್ಟದ ಅಭಿನಂದನಾ ಪ್ರಶಸ್ತಿಗೆ ಆಯ್ಕೆಯಾಗಿರುವ ದಾನಮ್ಮ ಸುಭಾಶ್ಚಂದ್ರ ಅವರಿಗೆ ಅವರ ಅಭಿಮಾನಿಗಳು, ಶಿಷ್ಯ ಬಳಗ, ಆಪ್ತರು, ಕುಟುಂಬಸ್ಥರು ಹಾಗೂ ಬಂಧುಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.



