ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ತಿಡಿಗೋಳ ಮತ್ತು ನಿಡಿಗೋಳ ಗ್ರಾಮಗಳಲ್ಲಿ ದಲಿತ ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ನವೆಂಬರ್ 8ರಂದು ‘ತಿಡಿಗೋಳ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ದಲಿತ ಮುಖಂಡ ಹಾಗೂ ಉಪನ್ಯಾಸಕ ತಾಯಪ್ಪ ತಿಡಿಗೋಳ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದಲ್ಲದೆ, ಅಸ್ಪೃಶ್ಯತೆ ಆಚರಣೆ, ನಿವೇಶನಗಳ ಅತಿಕ್ರಮಣ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ಟೋಬರ್ 18ರಂದು ತಿಡಿಗೋಳ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂದರ್ಭದಲ್ಲಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಯುವಕರ ರಕ್ಷಣೆಗೆ ಮುಂದಾದ ಮಹಿಳೆಯರು, ವೃದ್ಧರು ಹಾಗೂ ಇತರರ ಮೇಲೆಯೂ ಹಲ್ಲೆ ನಡೆದಿದೆ. ಘಟನೆಯ ನಂತರ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಕುಟುಂಬಗಳು ಸುರಕ್ಷತೆಯ ಕಾರಣದಿಂದ ಗ್ರಾಮ ತೊರೆಯುವಂತಾಗಿದೆ ಎಂದು ದೂರಿದರು.
ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ದಲಿತ ಯುವಕರ ವಿರುದ್ಧ 21 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ ಅವರು, ಈ ಪ್ರಕರಣಗಳನ್ನು ಹಿಂಪಡೆಯಬೇಕು. ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಪೊಲೀಸ್ ಭದ್ರತೆ ಒದಗಿಸುವ ಮೂಲಕ ಅವರು ನಿರ್ಭಯವಾಗಿ ತಮ್ಮ ಮನೆಗಳಿಗೆ ಮರಳಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಿಡಿಗೋಳ ಹಾಗೂ ನಿಡಿಗೋಳ ಗ್ರಾಮಗಳಲ್ಲಿ ದಲಿತರಿಗೆ ಸಾಮಾಜಿಕ ಸಮಾನತೆ ಇನ್ನೂ ಮರೀಚಿಕೆಯಾಗಿದೆ. ದೇವಸ್ಥಾನಗಳು, ಹೋಟೆಲ್ಗಳು ಸೇರಿದಂತೆ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ ಎಂಬ ದೂರುಗಳಿವೆ. ಇಂತಹ ಅಸ್ಪೃಶ್ಯತೆ ಆಚರಣೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ದಲಿತ ಸಮುದಾಯಕ್ಕೆ ಸೇರಿದ 17 ಕುಟುಂಬಗಳ ನಿವೇಶನಗಳನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪವಿದ್ದು, ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ನಿವೇಶನರಹಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಬೇಕು. ಮಹಿಳೆಯರಿಗೆ ಶೌಚಾಲಯ ಸೌಲಭ್ಯ, ಶುದ್ಧ ಕುಡಿಯುವ ನೀರು, ಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಮಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೆಲಸ ದೊರೆಯುತ್ತಿಲ್ಲ. ಜೀವನೋಪಾಯದ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಸಂತ್ರಸ್ತರಿಗೆ ಅಗತ್ಯ ಆಹಾರ ಧಾನ್ಯಗಳನ್ನು ಒದಗಿಸಬೇಕು. ಜಿಲ್ಲಾಡಳಿತ ಕೇವಲ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೆ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಂದಾಗಬೇಕು ಎಂದು ಹೇಳಿದರು.
ಅಕ್ಟೋಬರ್ 30ರಂದು ಸಿಂಧನೂರಿಗೆ ಆಗಮಿಸಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಗ್ರಾಮಗಳಲ್ಲಿನ ಸಮಸ್ಯೆಗಳು ಹಾಗೂ ದಲಿತ ಕುಟುಂಬಗಳ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗುವುದು. ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ನವೆಂಬರ್ 8ರಂದು ‘ತಿಡಿಗೋಳ ಚಲೋ’ ಹೋರಾಟ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಲಾಗುವುದು ಎಂದು ತಾಯಪ್ಪ ತಿಡಿಗೋಳ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್. ಮಾರೆಪ್ಪ, ರವೀಂದ್ರನಾಥ್ ಪಟ್ಟಿ, ಎಂ.ಆರ್. ಭೇರಿ, ಹೇಮರಾಜ್ ಆಸ್ಕಿಹಾಳ್, ರಾಜು ಬೊಮ್ಮನಹಾಳ, ನರಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



