ರಾಯಚೂರು: ನಗರದ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ 80 ಅಡಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದ್ದು, ಒಂದರಿಂದ ಒಂದೂವರೆ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬೇನ್ ಮೋಹಪಾತ್ರ ತಿಳಿಸಿದರು.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಸ್ತೆ ಒತ್ತುವರಿ, ಸ್ವಚ್ಛತೆ ಹಾಗೂ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತರು, ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆ ಬದಿಯ ಅಂಗಡಿ ಮಾಲೀಕರನ್ನು ಭೇಟಿ ಮಾಡಿ, ಅಗಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ರಸ್ತೆ ಒತ್ತುವರಿ ಮಾಡಿಕೊಂಡಿರುವವರಿಗೆ ಕಾನೂನು ಪ್ರಕಾರ ನೋಟಿಸ್ ಜಾರಿಗೊಳಿಸಲಾಗುವುದು. ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ಅಗಲೀಕರಣಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.
ಶಕ್ತಿನಗರ ಬಸ್ ನಿಲ್ದಾಣದ ಸಮೀಪ ರಾಜಕಾಲುವೆಯಲ್ಲಿರುವ ಅಪಾಯಕಾರಿ ಸ್ಥಳದ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಪಾಲಿಕೆಯ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಗತ್ಯ ಕಾಮಗಾರಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ ರಸ್ತೆ ಅಗಲೀಕರಣ ಯಾವಾಗ ಆರಂಭವಾಗಲಿದೆ ಎಂಬ ಕುರಿತು ಸಾರ್ವಜನಿಕರು ನಿರಂತರವಾಗಿ ವಿಚಾರಿಸುತ್ತಿದ್ದಾರೆ. ಅವರ ನಿರೀಕ್ಷೆಗೆ ಅನುಗುಣವಾಗಿ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಸ್ತೆ ಅಗಲೀಕರಣದ ಜೊತೆಗೆ ರಸ್ತೆ ಬದಿಯ ಸ್ವಚ್ಛತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳಿಗೂ ಆದ್ಯತೆ ನೀಡಲಾಗುವುದು. ಕಾಮಗಾರಿ ಆರಂಭಿಸುವ ಮುನ್ನ ಅಗತ್ಯ ಪರಿಶೀಲನೆ ಮತ್ತು ಇಲಾಖಾ ಮಟ್ಟದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.



