ರಾಯಚೂರು: ನಗರದ ಕಿಲ್ಲೇ ಬೃಹನ್ಮಠದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ 88ನೇ ವರ್ಷದ ಶ್ರೀದೇವಿ ಮಹಾಪುರಾಣ ಪ್ರವಚನವು ಆಯುಧ ಪೂಜೆಯ ದಿನದಂದು ಶ್ರದ್ಧಾಭಕ್ತಿಯಿಂದ ಮಹಾಮಂಗಳಗೊಂಡಿತು.

ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಪುರಾಣ ಪ್ರವಚನವನ್ನು ಖ್ಯಾತ ಪುರಾಣ ಪ್ರವಚನಕಾರ ಹಾಗೂ ಪುರಾಣ ಗ್ರಂಥಗಳ ಲೇಖಕ ವೇದಮೂರ್ತಿ ಶರಭಯ್ಯ ಶಾಸ್ತ್ರಿ ಕಂಬಾಳಿಮಠ ಬಳಗಾನೂರು ಅವರು ನಡೆಸಿಕೊಟ್ಟರು. ಒಂಬತ್ತು ದಿನಗಳ ಕಾಲ ಶ್ರೀದೇವಿ ಮಹಾಪುರಾಣದ ವಿವಿಧ ಪ್ರಸಂಗಗಳನ್ನು ಸಂಗೀತದೊಂದಿಗೆ ವಿವರಿಸಿ, ಭಕ್ತರಿಗೆ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳ ಕುರಿತು ತಿಳಿಸಿಕೊಟ್ಟರು.

ಮಹಾಮಂಗಳದ ಸಂದರ್ಭದಲ್ಲಿ ಶರಭಯ್ಯ ಶಾಸ್ತ್ರಿಗಳು ಪುರಾಣದ ಮುಕ್ತಾಯದ ಅಧ್ಯಾಯವನ್ನು ಸಂಗೀತದೊಂದಿಗೆ ಪಠಿಸಿ ಅದರ ಮಹತ್ವವನ್ನು ವಿವರಿಸಿದರು. ಮನುಷ್ಯನಲ್ಲಿರುವ ಅಹಂಕಾರ, ದುರ್ಗುಣಗಳು ಹಾಗೂ ತಾನೇ ಶ್ರೇಷ್ಠನೆಂಬ ಮನೋಭಾವವನ್ನು ತೊಡೆದುಹಾಕಿ, ಶಿವಧ್ಯಾನ ಮತ್ತು ಶಿವಚಿಂತನೆಯ ಮೂಲಕ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವುದೇ ಶ್ರೀದೇವಿ ಮಹಾಪುರಾಣದ ಉದ್ದೇಶವಾಗಿದೆ ಎಂದು ತಿಳಿಸಿದರು.

ಶ್ರೀದೇವಿ ಪುರಾಣವು ಕೇವಲ ದೇವಿಯ ಮಹಿಮೆಯನ್ನು ಸಾರುವುದಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಅರಿತು, ಜೀವನವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸುವ ಸಂದೇಶವನ್ನು ಒಳಗೊಂಡಿದೆ. ಈ ದೃಷ್ಟಿಯಿಂದ ಶ್ರೀದೇವಿ ಪುರಾಣವು ನಮ್ಮೆಲ್ಲರ ಬದುಕಿನ ಪುರಾಣವಾಗಿದೆ ಎಂದು ಹೇಳಿದರು.

ಬಳಿಕ ಶ್ರೀಮಠದ ಸಂಪ್ರದಾಯದಂತೆ ಮುಂದಿನ ವರ್ಷದ ಶ್ರೀದೇವಿ ಮಹಾಪುರಾಣ ಪ್ರವಚನದ ಆರಂಭಿಕ ಅಧ್ಯಾಯವನ್ನು ಸಂಗೀತದೊಂದಿಗೆ ಪಠಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮ ಸಂದೇಶ ನೀಡಿದ ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಕುಟುಂಬದ ಮೌಲ್ಯಗಳನ್ನು ಕಲಿಸುವುದು ಪಾಲಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಸಾಧ್ಯವಾದಷ್ಟು ಸ್ವದೇಶದಲ್ಲಿಯೇ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನಹರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಹಲವು ಯೋಜನೆಗಳು ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದೇಶದಲ್ಲಿ ಶಿಕ್ಷಣ ಪಡೆದು ಉದ್ಯೋಗದಲ್ಲಿರುವ ಕೆಲವರಿಗೆ ಕುಟುಂಬದ ತುರ್ತು ಸಂದರ್ಭಗಳಲ್ಲಿಯೂ ಸ್ವದೇಶಕ್ಕೆ ಮರಳಲು ಸಾಧ್ಯವಾಗದ ಪರಿಸ್ಥಿತಿಗಳು ಎದುರಾಗುತ್ತವೆ. ತಂದೆ-ತಾಯಿಯ ಅಂತಿಮ ಕ್ಷಣಗಳಲ್ಲಿಯೂ ಅವರೊಂದಿಗೆ ಇರಲಾಗದ ಘಟನೆಗಳು ನೋವುಂಟುಮಾಡುತ್ತವೆ. ಹೀಗಾಗಿ ಮಕ್ಕಳು ಎಲ್ಲಿಯೇ ಶಿಕ್ಷಣ ಪಡೆದರೂ, ಉದ್ಯೋಗ ಮಾಡಿದರೂ ತಮ್ಮ ಪಾಲಕರನ್ನು ಗೌರವಿಸುವ ಮತ್ತು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಸಂಸ್ಕಾರ ಹೊಂದಿರಬೇಕು ಎಂದು ತಿಳಿಸಿದರು.

ವಿದೇಶಕ್ಕೆ ಹೋಗಬಾರದು ಎಂಬುದು ತಮ್ಮ ಅಭಿಪ್ರಾಯವಲ್ಲ. ಮಕ್ಕಳು ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ತಂದೆ-ತಾಯಿಯ ಕಷ್ಟಸುಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಮಾನವೀಯತೆ, ಕರುಣೆ ಮತ್ತು ಕುಟುಂಬದ ಬಾಂಧವ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸ್ವಾಮಿಗಳು ಕಿವಿಮಾತು ಹೇಳಿದರು.

ಚಿಕ್ಕ ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಉತ್ತಮ ಗ್ರಂಥಗಳು ಮತ್ತು ಪುಸ್ತಕಗಳನ್ನು ನೀಡಬೇಕು. ಮಠ, ಮಂದಿರಗಳ ಪರಿಚಯ ಮಾಡಿಸುವ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕುವಂತೆ ಮಕ್ಕಳನ್ನು ಬೆಳೆಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಜಯದಶಮಿಯಂದು ಸಂಜೆ 6.30ಕ್ಕೆ ಶ್ರೀಮಠದ ಬನ್ನಿ ಮಹಾಂಕಾಳಿ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿಜಯದಶಮಿ ಆಚರಿಸಲಾಗುವುದು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸ್ವಾಮಿಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಜೇಶಕುಮಾರ ಮುರುಳಿಧರ, ಮಹಾನಗರ ಪಾಲಿಕೆಯ ಆಡಳಿತ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಶ್ರೀದೇವಿ ಮಹಾಪುರಾಣ ಪ್ರವಚನ ನಡೆಸಿಕೊಟ್ಟ ವೇದಮೂರ್ತಿ ಶರಭಯ್ಯ ಶಾಸ್ತ್ರಿ ಕಂಬಾಳಿಮಠ ಬಳಗಾನೂರು, ಸಂಗೀತ ಸೇವೆ ಸಲ್ಲಿಸಿದ ಬ್ರಹ್ಮೇಂದ್ರ ಮಂಜರ್ಲಾ, ಸುದರ್ಶನ, ರಾಯಚೂರು ಆಕಾಶವಾಣಿ ಸಿಬ್ಬಂದಿ ನರಸಿಂಹಲು, ಧ್ವನಿವರ್ಧಕ ವ್ಯವಸ್ಥೆಯ ಸಹಾಯಕ ಎಂಜಿನಿಯರ್ ಹುಸೇನ್ ಹಾಗೂ ಒಂಬತ್ತನೇ ದಿನದ ಮಹಾಪ್ರಸಾದ ಸೇವೆ ಸಲ್ಲಿಸಿದ ರಾಜೇಶಕುಮಾರ ದಂಪತಿಯನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಹಾಮಂಗಳ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆದರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.