ತುಂಗಾ ಬಿಂಬ/ರಾಯಚೂರು: ಜಿಲ್ಲೆಯ ರೈತರಿಂದ ಜೋಳ ಖರೀದಿಸಿದ ಮೊತ್ತದಲ್ಲಿ ಈಗಾಗಲೇ ಸುಮಾರು ₹350 ಕೋಟಿ ಪಾವತಿಸಲಾಗಿದ್ದು, ಮೇ 31ರಿಂದ ಖರೀದಿಸಿರುವ ಜೋಳಕ್ಕೆ ಸಂಬಂಧಿಸಿದಂತೆ ಇನ್ನೂ ₹109 ಕೋಟಿ ರೈತರಿಗೆ ನೀಡಬೇಕಾಗಿದೆ. ಬಾಕಿ ಹಣವನ್ನು ಆದಷ್ಟು ಶೀಘ್ರ ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರೀದಿಸಿದ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹1,000 ಕೋಟಿ ಬರಬೇಕಿದೆ. ಈ ಮೊತ್ತ ಬಿಡುಗಡೆಯಾಗದಿರುವುದರಿಂದ ಜಿಲ್ಲೆಯ ರೈತರಿಗೆ ಪಾವತಿಸಬೇಕಾದ ₹109 ಕೋಟಿ ಬಾಕಿ ಉಳಿದಿದೆ ಎಂದು ಹೇಳಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಾಕಿ ಮೊತ್ತವನ್ನು ಶೀಘ್ರ ಪಾವತಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಇನ್ನೂ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಅಗತ್ಯವಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ ₹5,000 ಕೋಟಿ ಅನುದಾನ ನೀಡಲಾಗುತ್ತಿದೆ. 2013ರಿಂದ ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ, ರಸ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಜಿಲ್ಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಪ್ರಭಾವ ಬಳಸಿ ಅಥವಾ ಅನಧಿಕೃತವಾಗಿ ನೀರಾವರಿ ಮಾಡಿಕೊಳ್ಳುತ್ತಿರುವುದು ಕಂಡುಬಂದಲ್ಲಿ, ಅಂತಹ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು. ರಾಯಚೂರು ಜಿಲ್ಲೆಯಲ್ಲಿ ಯುವಜನರ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಉಲ್ಲೇಖಿಸಿದ ಸಚಿವರು, ಜಿಲ್ಲೆಯ ಯುವಶಕ್ತಿಯನ್ನು ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಎಸ್. ಬೋಸರಾಜು, ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.