ರಾಯಚೂರು, ಸೆ.22: ಆಯುಷ್ ವೈದ್ಯರನ್ನು ಗುರಿಯಾಗಿಸಿಕೊಂಡು ಕಿರುಕುಳ, ಬೆದರಿಕೆ ಹಾಗೂ ಮಾನಸಿಕ ಒತ್ತಡ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವೈದ್ಯರಿಗೆ ಸಮರ್ಪಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ (AYUSH FEDERATION OF INDIA) ಕರ್ನಾಟಕ ಘಟಕದ ನೇತೃತ್ವದಲ್ಲಿ ಮಂಗಳವಾರ ನಗರದ ಮಹಾನಗರ ಪಾಲಿಕೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.

ಧರಣಿಯಲ್ಲಿ ಮಾತನಾಡಿದ ಎಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ. ಶ್ರೀಕಾಂತ್ ಕೊಂಕಣಿ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಆಯುಷ್ ವೈದ್ಯರು ಹಲವು ಸಮಸ್ಯೆಗಳ ನಡುವೆಯೂ ಸೇವೆ ಮುಂದುವರಿಸುತ್ತಿದ್ದಾರೆ. ಆದರೆ ಕೆಲವರು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ವೈದ್ಯರ ವಿರುದ್ಧ ಪದೇಪದೇ ದೂರು ನೀಡಿ, ಅವರ ವೃತ್ತಿ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಯುಷ್ ವೈದ್ಯಾಧಿಕಾರಿಯೊಬ್ಬರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಯೋಚನೆ ಮಾಡುವ ಹಂತಕ್ಕೆ ತಲುಪಿರುವ ಆರೋಪ ಕೇಳಿಬಂದಿರುವುದು ಗಂಭೀರ ವಿಚಾರವಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಪಾಟೀಲ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಿರುಕುಳ, ಸುಲಿಗೆ ಹಾಗೂ ದುರುದ್ದೇಶಪೂರ್ವಕ ದೂರುಗಳ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ವೈದ್ಯರನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸುವ ಅಥವಾ ಮಾನಸಿಕವಾಗಿ ಹಿಂಸಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಆಯುಷ್ ವೈದ್ಯರು ಕಪ್ಪುಪಟ್ಟಿ ಧರಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲೂ ಆಯುಷ್ ವೈದ್ಯರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ನಿರಂತರ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಇಂತಹ ವೈದ್ಯರ ವೃತ್ತಿಪರ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವುದು ಸರ್ಕಾರ ಹಾಗೂ ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದು ಸಂಘಟನೆ ತಿಳಿಸಿತು.

ಮುದಗಲ್, ಮಾನ್ವಿ, ಜಾಲಹಳ್ಳಿ ಮತ್ತು ದೇವದುರ್ಗ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ವಿಚಾರಣೆಯನ್ನು ವಿಳಂಬಗೊಳಿಸದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಯುಷ್ ವೈದ್ಯರ ಸೇವೆಗೆ ಸಂಬಂಧಿಸಿದ ಸರ್ಕಾರದ ಆದೇಶಗಳು ಹಾಗೂ ಕೇಂದ್ರ ಸರ್ಕಾರದ ಎನ್‌ಸಿಐಎಸ್‌ಎಂ ಅಧಿಸೂಚನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ವೈದ್ಯರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ವೈದ್ಯರ ಸುರಕ್ಷತೆ, ವೃತ್ತಿಪರ ಸ್ವಾತಂತ್ರ್ಯ ಹಾಗೂ ಗೌರವಕ್ಕೆ ಧಕ್ಕೆ ತರುವ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯದ ಸುಮಾರು 70 ಸಾವಿರ ಆಯುಷ್ ವೈದ್ಯರನ್ನು ಒಗ್ಗೂಡಿಸಿ ರಾಜ್ಯವ್ಯಾಪಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಡಾ. ಶ್ರೀಕಾಂತ್ ಕೊಂಕಣಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮೋಹನ ಬಿರಾದಾರ, ರಾಜ್ಯ ಉಪಾಧ್ಯಕ್ಷ ಡಾ. ಶ್ರೀಕಾಂತ್ ಕೊಂಕಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಆನಂದ ಎಸ್. ಕಿರಿಶಾಲ, ಡಾ. ಅಮೀತ್ ಎಂ.ಎಸ್. ರಾಜ್ಯ ಉಪಾಧ್ಯಕ್ಷರು, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳ ಆಯುಷ್ ವೈದ್ಯರು ಭಾಗವಹಿಸಿದ್ದರು.