ರಾಯಚೂರು: ನಗರದ 7ನೇ ಹಾಗೂ 9ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಬಹುದಾದ ಅವಘಡಗಳಿಂದ ಸಾವು-ನೋವು ತಪ್ಪಿಸಲು ಪ್ರಮುಖ ವೃತ್ತಗಳಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಬಂಗಿ ಮುನಿರೆಡ್ಡಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಮೇಲಿನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಅತ್ಯಂತ ದುಃಖಕರವಾಗಿದೆ. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.
7ನೇ ಮತ್ತು 9ನೇ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇರುತ್ತದೆ. ಮೆರವಣಿಗೆ ವೇಳೆ ಯಾರಾದರೂ ಬಿದ್ದು ಗಾಯಗೊಂಡರೆ ಅಥವಾ ರಕ್ತಸ್ರಾವ ಉಂಟಾದರೆ ತಕ್ಷಣ ಚಿಕಿತ್ಸೆ ದೊರೆಯುವುದು ಅತ್ಯಂತ ಮುಖ್ಯ. ಆದ್ದರಿಂದ ಜನಸಂದಣಿ ಹೆಚ್ಚಿರುವ ಪ್ರಮುಖ ವೃತ್ತಗಳಲ್ಲಿ ಪ್ರಥಮ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದರ ಜೊತೆಗೆ ಆಂಬುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಐದನೇ ದಿನದ ವಿಸರ್ಜನೆ ವೇಳೆ ನಡೆದ ದುರ್ಘಟನೆಗೆ ರಸ್ತೆ ಗುಂಡಿಯೇ ಕಾರಣ ಎಂಬ ಆರೋಪವನ್ನು ಮುನಿರೆಡ್ಡಿ ಮಾಡಿದ್ದಾರೆ. ಟ್ರ್ಯಾಕ್ಟರ್ ರಸ್ತೆ ಗುಂಡಿಯನ್ನು ದಾಟುವ ಸಂದರ್ಭದಲ್ಲಿ ಏಕಾಏಕಿ ಅಲುಗಾಡಿದ್ದು, ಅದರ ಮೇಲಿದ್ದ ಇಬ್ಬರು ಮಕ್ಕಳು ಕೆಳಗೆ ಬಿದ್ದು ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಗಣೇಶ ವಿಸರ್ಜನೆ ಮೆರವಣಿಗೆಗೂ ಮುನ್ನ ನಗರದ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕು. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪೊಲೀಸ್, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಕೈಗೊಳ್ಳದೆ ಮುಂದಿನ ವಿಸರ್ಜನೆ ವೇಳೆ ಅವಘಡಗಳು ಸಂಭವಿಸಿದರೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆಯೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಬಂಗಿ ಮುನಿರೆಡ್ಡಿ ಎಚ್ಚರಿಸಿದ್ದಾರೆ.



