ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ರಾಜಕೀಯ ಪಕ್ಷಗಳ ಭೇದ ಮರೆತು ಜನಪ್ರತಿನಿಧಿಗಳು ಒಂದಾಗಿರುವಂತೆ, ಕಾಲುವೆಯ ಕೆಳಭಾಗದ ರೈತರ ಹಿತಕ್ಕಾಗಿ ನಾವೂ ಪಕ್ಷಾತೀತವಾಗಿ ಒಂದಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಎಚ್ಚರಿಕೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತಿಕೊಳ್ಳುತ್ತಿರುವುದರಿಂದ ಕೆಳಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂದು ಆರೋಪಿಸಿದರು. ಇಂತಹ ಅಕ್ರಮ ನೀರು ಬಳಕೆಯನ್ನು ನಿಯಂತ್ರಿಸುವ ಬದಲು ಸಿಂಧನೂರು ಭಾಗದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಒಂದಾಗಿ ರಾಯಚೂರು–ಗಂಗಾವತಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು.

ಜನಪ್ರತಿನಿಧಿಗಳಾಗಿ ಎಲ್ಲ ಪ್ರದೇಶಗಳಿಗೂ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಮೇಲ್ಭಾಗದಲ್ಲಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡರೆ ಕೆಳಭಾಗದ ರೈತರ ಬೆಳೆಗಳಿಗೆ ಮಾತ್ರವಲ್ಲದೆ ರಾಯಚೂರು ನಗರ ಹಾಗೂ ತಾಲೂಕಿನ ಕುಡಿಯುವ ನೀರಿನ ಪೂರೈಕೆಗೂ ತೊಂದರೆಯಾಗಲಿದೆ ಎಂದು ಹೇಳಿದರು.

ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಹಂಚಿಕೆ ವ್ಯವಸ್ಥೆಯಡಿ ರಾಯಚೂರು ತಾಲೂಕಿನ ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡುತ್ತದೆ. “ನಮಗೆ ನಿಗದಿಯಾಗಿರುವ ನೀರನ್ನೇ ಕೇಳುತ್ತಿದ್ದೇವೆ; ಯಾರ ಬಳಿಯೂ ಭಿಕ್ಷೆ ಕೇಳುತ್ತಿಲ್ಲ” ಎಂದು ದದ್ದಲ್ ಹೇಳಿದರು.

ಕಾಲುವೆಯ 104ನೇ ಮೈಲ್ ಭಾಗದಲ್ಲಿ ಅಗತ್ಯ ಪ್ರಮಾಣದ ನೀರಿನ ಮಟ್ಟ ಕಾಯ್ದುಕೊಳ್ಳಬೇಕಾಗಿದೆ. ಆದರೆ ಮೇಲ್ಭಾಗದಲ್ಲಿ ಅನಧಿಕೃತವಾಗಿ ನೀರು ಎತ್ತಿಕೊಳ್ಳುತ್ತಿರುವುದರಿಂದ ಕೆಳಭಾಗಕ್ಕೆ ಬರಬೇಕಾದ ನೀರಿನ ಪ್ರಮಾಣ ಕುಸಿಯುತ್ತಿದೆ ಎಂದು ಆರೋಪಿಸಿದ ಅವರು, ನೀರು ಹಂಚಿಕೆಯಲ್ಲಿ ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸಿದರು.

2026-27ನೇ ಸಾಲಿನ ಮುಂಗಾರು ಹಂಗಾಮಿಗೆ ನಡೆದ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆಗಸ್ಟ್ 11ರಿಂದ ನವೆಂಬರ್ 10ರವರೆಗೆ ದಿನಕ್ಕೆ 4,100 ಕ್ಯೂಸೆಕ್ಸ್ ನೀರು ಹರಿಸುವ ವೇಳಾಪಟ್ಟಿ ನಿಗದಿಪಡಿಸಲಾಗಿತ್ತು. ನೀರಿನ ಲಭ್ಯತೆ ಹಾಗೂ ಒಳಹರಿವಿನ ಪರಿಸ್ಥಿತಿಗೆ ಅನುಗುಣವಾಗಿ ಈ ವೇಳಾಪಟ್ಟಿ ಪರಿಷ್ಕರಣೆಗೆ ಒಳಪಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.

ರಾಯಚೂರು ನಗರ ಮತ್ತು ತಾಲೂಕಿನ ಕುಡಿಯುವ ನೀರಿನ ಅಗತ್ಯ ಪೂರೈಸಲು ಗಣೇಕಲ್ ಸಮತೋಲನ ಜಲಾಶಯವನ್ನು ಭರ್ತಿ ಮಾಡುವುದು ಅತ್ಯಂತ ಅಗತ್ಯವಾಗಿದೆ. ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಸುವುದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡು, ಗಣೇಕಲ್ ಜಲಾಶಯಕ್ಕೆ ನೀರು ತಲುಪಿಸುವುದನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ದಿನ್ನಿ, ಗಾರಲದಿನ್ನಿ, ಮಟಮಾರಿ, ಮರ್ಚೆಟ್ಹಾಳ, ಪೂರತಿಪ್ಲಿ ಹಾಗೂ ರಾಂಪುರ ಭಾಗದ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬೇಸಿಗೆಯಲ್ಲಿ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೆಳಭಾಗದ ರೈತರು ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ನೀರನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ನೀರು ಹಂಚಿಕೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೆಳಭಾಗದ ರೈತರಿಗೆ ನ್ಯಾಯಯುತ ಪಾಲು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

“ಮೇಲ್ಭಾಗದವರ ಹೋರಾಟದ ಒತ್ತಡಕ್ಕೆ ಮಣಿದು ಕೆಳಭಾಗಕ್ಕೆ ನೀರು ಹರಿಸುವಲ್ಲಿ ನಿರ್ಲಕ್ಷ್ಯ ತೋರಿದರೆ, ನಾವು ಕೂಡ ಪಕ್ಷಾತೀತವಾಗಿ ಒಂದಾಗಿ ಸಾಥ್ ಮೈಲ್ ಬಳಿ ರಸ್ತೆ ಬಂದ್ ಮಾಡಿ ಹೋರಾಟ ನಡೆಸಬೇಕಾಗುತ್ತದೆ” ಎಂದು ಶಾಸಕ ಬಸನಗೌಡ ದದ್ದಲ್ ಎಚ್ಚರಿಸಿದರು.