ರಾಯಚೂರು: ಹಿರಿಯ ಸಾಹಿತಿ ಬಶೀರ್ ಅಹ್ಮದ್ ಹೊಸಮನಿ ಅವರ ಐತಿಹಾಸಿಕ ನಾಟಕ ‘ರಾಷ್ಟ್ರಕೂಟ ಸಾರ್ವಭೌಮರು’ ಕೃತಿಯ ಜನಾರ್ಪಣೆ ಸಮಾರಂಭವನ್ನು ಸೆ.27 ರಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಗೌರವ ಕೋಶಾಧ್ಯಕ್ಷೆ ಪ್ರತಿಭಾ ಗೋನಾಳ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಸಮನಿ ಪ್ರಕಾಶನ ರಾಯಚೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಸಮಾರಂಭ ಆರಂಭವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಉದ್ಘಾಟಿಸಲಿದ್ದು, ಯುವ ಕವಿಗಳು ಹಾಗೂ ಸಾಹಿತಿಗಳಾದ ವೇಣು ಜಾಲಿಬೆಂಚಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಸವರ್ಮಂಗಳ ಒತ್ತೂರು ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು, ವಿದ್ಯಾಂಸರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರತಿಭಾ ಗೋನಾಳ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಹೊಸಮನಿ (ಹೊಸಮನಿ ಪ್ರಕಾಶನ, ರಾಯಚೂರು), ರಫೀಕ್ ಅಹ್ಮದ್, ರಾಮಣ್ಣ ಮೈದರ್, ಎಂ. ವೀರಭದ್ರಯ್ಯ ಸ್ವಾಮಿ ಹಾಗೂ ಮಹಿಂದರ್ ಸಿಂಗ್ ಉಪಸ್ಥಿತರಿದ್ದರು.



