ರಾಯಚೂರು: ಜಿಲ್ಲೆಯಲ್ಲಿ ತೀವ್ರ ಬರಗಾಲ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ದಾಖಲಿಸುವ ಮೂಲಕ ಅರ್ಹ ರೈತರಿಗೆ ಪರಿಹಾರ ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಕಾಲಮಿತಿಯೊಳಗೆ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಬೆಳೆ ಸಮೀಕ್ಷೆ ವಿಳಂಬವಾದರೆ ರೈತರು ಅಳಿದುಳಿದ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡುವ ಸಾಧ್ಯತೆ ಇರುವುದರಿಂದ ನಂತರ ನೈಜ ಬೆಳೆ ಸ್ಥಿತಿಯನ್ನು ದಾಖಲಿಸುವುದು ಕಷ್ಟವಾಗುತ್ತದೆ. ತಾಂತ್ರಿಕ ಕಾರಣಗಳಿಂದ ಬೆಳೆ ವಿಮೆ ಪರಿಹಾರದ ಮೊತ್ತ ಕಡಿತವಾಗದಂತೆ ಎಚ್ಚರಿಕೆ ವಹಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೇವಲ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ನಿಯೋಜಿಸದೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ವಿಮೆ ಏಜೆನ್ಸಿ ಸಿಬ್ಬಂದಿಯೊಂದಿಗೆ ಖುದ್ದಾಗಿ 4-5 ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ರೈತರು ಯಾವುದೇ ಬೆಳೆ ಬಿತ್ತನೆ ಮಾಡದಿದ್ದಲ್ಲಿ ಅಂತಹ ಪ್ರದೇಶವನ್ನು ‘ಬಿತ್ತನೆ ಇಲ್ಲದ ಪ್ರದೇಶ’ ಎಂದು ದಾಖಲಿಸಿ ಸಂಬಂಧಿಸಿದ ರೈತರಿಗೆ ಪ್ರಮಾಣಪತ್ರ ನೀಡಬೇಕು. ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಾಧ್ಯವಾದಷ್ಟು ನೆರವು ದೊರಕಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದ್ದು, ಕೊನೆಯ ಭಾಗದ ರೈತರಿಗೂ ನೀರು ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಪಾಳಿಯಂತೆ ನಿಯೋಜಿಸಲಾಗುವುದು. ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಸ್ವಚ್ಛಗೊಳಿಸಿದ ಜಿಪಿಎಸ್ ಛಾಯಾಚಿತ್ರಗಳನ್ನು ಪ್ರತ್ಯೇಕ ರಿಜಿಸ್ಟರ್ನಲ್ಲಿ ದಾಖಲಿಸಬೇಕು. ಸ್ಥಳೀಯರಿಂದ ಸಹಿ ಪಡೆದುಕೊಳ್ಳುವುದರ ಜೊತೆಗೆ ಎಫ್ಟಿಕೆ ಕಿಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರು ಪೂರೈಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಬಿಡುಗಡೆಯಾಗಲಿದ್ದು, ಬೋರ್ವೆಲ್ಗಳ ದುರಸ್ತಿ ಹಾಗೂ ಅಗತ್ಯವಿರುವ ಕಡೆ ಬೋರ್ವೆಲ್ಗಳನ್ನು ಬಾಡಿಗೆ ಪಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.
ಗ್ರಾಮ ಪಂಚಾಯತಿಗಳ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆ ವಸೂಲಾತಿಗೆ ಆದ್ಯತೆ ನೀಡಬೇಕು. ಸಿಬ್ಬಂದಿ ವೇತನ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ವಿವಿಧ ಸ್ಥಳೀಯ ಅಗತ್ಯಗಳಿಗೆ ತೆರಿಗೆ ಆದಾಯವನ್ನು ಬಳಸಿಕೊಳ್ಳಬಹುದಾಗಿದೆ. ಆದ್ದರಿಂದ ಗ್ರಾಮ ಪಂಚಾಯತಿಗಳಲ್ಲಿ ತಂಡಗಳನ್ನು ರಚಿಸಿ ತೆರಿಗೆ ವಸೂಲಾತಿ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಬೆಂಕಿ ಅವಘಡ, ಪ್ರವಾಹ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸಾರ್ವಜನಿಕರ ಪ್ರಾಣ ರಕ್ಷಣೆಗೆ ನೆರವಾಗುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಿಟ್ಗಳನ್ನು ಸಾಂಕೇತಿಕವಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿತರಿಸಲಾಯಿತು.
ಜಿಲ್ಲೆಯಾದ್ಯಂತ ಮನೆಮನೆಗೆ ತೆರಳಿ ಶೌಚಾಲಯ ಸಮೀಕ್ಷೆಯನ್ನು 15 ದಿನಗಳೊಳಗೆ ನಡೆಸಬೇಕು. ಜಿಲ್ಲಾ ಪಂಚಾಯತಿಯಿಂದ ನೀಡಲಾಗುವ ಪ್ರಶ್ನಾವಳಿಯಂತೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ಅ.2ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು. ‘ಸ್ವಚ್ಛತಾ ಹೀ ಸೇವಾ’ ಘೋಷವಾಕ್ಯದಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯಿಂದ ಅನುಷ್ಠಾನಗೊಳಿಸಲಾಗಿರುವ ವಿವಿಧ ಯೋಜನೆಗಳ ಮಾಹಿತಿ ಒಳಗೊಂಡ ‘ರಾಯಚೂರು ಗ್ರಾಮೀಣ ಪತ್ರಿಕೆ’ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿರುಮಲರೆಡ್ಡಿ ಅವರಿಗೆ ಆಗಸ್ಟ್ ತಿಂಗಳ ಉತ್ತಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ‘ನಿರ್ಮಲ ನಿಲಯ’ ಅಭಿಯಾನಕ್ಕೆ ಚಾಲನೆ ನೀಡಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈಶ್ವರ್ ಕಾಂದೂ ಮಾತನಾಡಿ, ‘ಪೌಷ್ಟಿಕ ರಾಯಚೂರು’ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಯೋಜನೆಗೆ ಕೆಕೆಆರ್ಡಿಬಿಯಿಂದ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿದೆ. ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಮಸ್ಕಿ ತಾಲೂಕಿನಲ್ಲಿ ಶಕ್ತಿ ಕೇಂದ್ರ ಆರಂಭಿಸಲು ನೀತಿ ಆಯೋಗದಿಂದ ಅನುದಾನ ಬಿಡುಗಡೆಯಾಗಿದ್ದು, ಅನುದಾನವನ್ನು ಶೀಘ್ರವಾಗಿ ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ವಿವಿಧ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



