ರಾಯಚೂರು: ಯುವ ಸಮುದಾಯವನ್ನು ದುರ್ವ್ಯಸನಗಳಿಂದ ದೂರವಿಟ್ಟು ಆರೋಗ್ಯಕರ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಸದಾ ಬದ್ಧವಾಗಿದ್ದು, ನೂರು ವಾರಗಳ ಸಂಕಲ್ಪ ಅಭಿಯಾನದಡಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸುಗುಣಾ ಬಸವರಾಜ್ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯ ಮೈ ಭಾರತ್-ಎನ್‌ಎಸ್‌ಎಸ್ ನಿರ್ದೇಶನಾಲಯದ ವತಿಯಿಂದ ‘ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್’ ಸಂಕಲ್ಪ ಅಭಿಯಾನದ ಅಂಗವಾಗಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಸಿತ ಭಾರತಕ್ಕಾಗಿ ವ್ಯಸನಮುಕ್ತ ಯುವ ಸಮುದಾಯವನ್ನು ರೂಪಿಸುವುದು ಅಭಿಯಾನದ ಪ್ರಮುಖ ಆಶಯವಾಗಿದೆ. ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಗಳಿಗೆ ಅನುಗುಣವಾಗಿ ನೂರು ವಾರಗಳ ಅಭಿಯಾನದ ಅವಧಿಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವಜನರಲ್ಲಿ ದುರ್ವ್ಯಸನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುವುದು. ವಿದ್ಯಾರ್ಥಿಗಳ ಆರೋಗ್ಯ, ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಘಟಕ ಕಾರ್ಯನಿರ್ವಹಿಸಲಿದೆ ಎಂದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಮಾದಕ ಪದಾರ್ಥಗಳ ವ್ಯಸನವು ವ್ಯಕ್ತಿಯ ಆರೋಗ್ಯ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಯುವಜನರು ಇಂತಹ ದುರ್ವ್ಯಸನಗಳ ಆಕರ್ಷಣೆಗೆ ಒಳಗಾಗದೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ರಾಷ್ಟ್ರ ನಿರ್ಮಾಣದ ಕಡೆಗೆ ಗಮನಹರಿಸಬೇಕು. ‘ನಶಾ ಮುಕ್ತ್ ಯುವಾ ಫಾರ್ ವಿಕ್ಸಿತ್ ಭಾರತ್’ ಅಭಿಯಾನ ಯುವಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿ ಎಂದರು.

ವಲಯ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಮಾತನಾಡಿ, ಹರೆಯದಲ್ಲಿ ಯುವಜನರನ್ನು ಆಕರ್ಷಿಸಬಹುದಾದ ವಿವಿಧ ದುಶ್ಚಟಗಳು, ಅವುಗಳಿಂದ ಉಂಟಾಗುವ ಪರಿಣಾಮಗಳು ಹಾಗೂ ಅವುಗಳಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷ ಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿಯಾನದ ಮೊದಲ ಹಂತವಾಗಿ ಸೆ.18ರಿಂದ ಡಿಸೆಂಬರ್ ಅಂತ್ಯದವರೆಗೆ 12 ವಾರಗಳ ಕಾಲ ‘ಮೈ ಹೆಲ್ತ್-ಮೈ ಪ್ರೈಡ್’, ‘ಫಿಟ್ ಯೂಥ್-ಅಡಿಕ್ಷನ್ ಫ್ರಿ ಯೂಥ್’, ‘ಲೈಫ್ ಸ್ಕಿಲ್ಸ್ ಮಂಥ್’ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಯುವ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮದ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತಕ್ಕಾಗಿ ವ್ಯಸನಮುಕ್ತ ಯುವಾ’ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಡಾ. ಜ್ಯೋತಿ ಸಿ.ಕೆ., ಡಾ. ಸಯ್ಯದಾ ರಶೀದಾ ಪರ್ವೀನ್, ಶರಣಗೌಡ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಸ್ವಯಂಸೇವಕಿಯರಾದ ಜೆ.ಎಸ್. ಸುಷ್ಮಾ, ಅನ್ನಪೂರ್ಣಾ, ಸುವರ್ಣಾ, ಸಂಗೀತಾ, ಭವಾನಿ, ಜಮುನಾ, ಜಮುಲಮ್ಮ ಹಾಗೂ ಮಧುಲತಾ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.