ರಾಯಚೂರು: ಗಣೇಶೋತ್ಸವವು ಶ್ರದ್ಧೆ, ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಾವುದೇ ಅವಘಡಗಳಿಗೆ ಅವಕಾಶವಿಲ್ಲದಂತೆ ನಡೆಯಬೇಕು. ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಪಾಲ್ಗೊಳ್ಳಲು ಗಣೇಶ ವಿಸರ್ಜನೆ ಮೆರವಣಿಗೆಗಳನ್ನು ಮುಂಜಾನೆ ಅಥವಾ ಹಗಲಿನ ವೇಳೆಯಲ್ಲೇ ಆರಂಭಿಸುವಂತೆ ಗಜಾನನ ಉತ್ಸವ ಸಮಿತಿಗಳು ಮುಂದಾಗಬೇಕು ಎಂದು ಮಾಜಿ ಶಾಸಕ ಎ. ಪಾಪಾರೆಡ್ಡಿ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ದುಃಖಕರವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಮುಂದಿನ ವಿಸರ್ಜನಾ ಮೆರವಣಿಗೆಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವುದನ್ನು ಪೊಲೀಸ್ ಮಾಹಿತಿಯನ್ನಾಧರಿಸಿದ ವರದಿಗಳು ದೃಢಪಡಿಸಿವೆ.

ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿಯೇ ಮೆರವಣಿಗೆಗಳನ್ನು ಸುರಕ್ಷಿತವಾಗಿ ನಡೆಸುವಂತೆ ಹಾಗೂ ಅತಿಯಾದ ಶಬ್ದದ ಡಿಜೆ ಬಳಕೆ ತಪ್ಪಿಸುವಂತೆ ಸಮಿತಿಗಳಿಗೆ ಮನವಿ ಮಾಡಲಾಗಿತ್ತು. ಮಧ್ಯರಾತ್ರಿಯಲ್ಲಿ ಮೆರವಣಿಗೆ ಆರಂಭಿಸಿ ಇಡೀ ರಾತ್ರಿ ನಡೆಸುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಕುಟುಂಬ ಸಮೇತ ಬರುವ ಸಾರ್ವಜನಿಕರು ಸಂಭ್ರಮದಲ್ಲಿ ಭಾಗವಹಿಸುವ ಅವಕಾಶ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಗರದ ಎಲ್ಲ ವರ್ಗದ ಜನರು ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಿ ಪಾಲ್ಗೊಳ್ಳುವಂತಾಗಲು ಸಮಯ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ. ಮೆರವಣಿಗೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿ, ಭಜನೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಕೆಲವು ಕಡೆ ಮಹಿಳೆಯರು ಮತ್ತು ಭಕ್ತರ ಸಹಭಾಗಿತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಮಾದರಿಯನ್ನು ಇತರ ಗಜಾನನ ಸಮಿತಿಗಳೂ ಅಳವಡಿಸಿಕೊಳ್ಳಬೇಕು ಎಂದರು.

ಗಜಾನನ ಸಮಿತಿಗಳಿಗೆ ಸಹಾಯ ನೀಡುವ ರಾಜಕೀಯ ಹಾಗೂ ಸಾಮಾಜಿಕ ಮುಖಂಡರೂ ಸುರಕ್ಷಿತ ಮತ್ತು ಹಗಲಿನ ವಿಸರ್ಜನಾ ಮೆರವಣಿಗೆಗೆ ಪ್ರೋತ್ಸಾಹ ನೀಡಬೇಕು. ಹೊಸ ಸುರಕ್ಷತಾ ಪದ್ಧತಿಗಳನ್ನು ರೂಢಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಅನಾಹುತಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಣೇಶೋತ್ಸವದಲ್ಲಿ ಅತಿಯಾದ ಡಿಜೆ, ಅಪಾಯಕಾರಿಯಾದ ವಾಹನ ಸಂಚಾರಕ್ಕಿಂತ ಧಾರ್ಮಿಕ ಆಚರಣೆ, ಸಂಸ್ಕೃತಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಸಮಿತಿಗಳ ಮನವೊಲಿಸಿ, ಅವಘಡಮುಕ್ತ ಗಣೇಶೋತ್ಸವಕ್ಕೆ ಕೈಜೋಡಿಸಬೇಕು ಎಂದು ಪಾಪಾರೆಡ್ಡಿ ಕೋರಿದರು.

ಈ ಸಂದರ್ಭದಲ್ಲಿ ಬೆಟ್ಟಪ್ಪ, ಆರ್‌ಡಿಎ ಮಾಜಿ ಅಧ್ಯಕ್ಷ ರಾಜಕುಮಾರ, ಅಂಜಿನಯ್ಯ ಕಡಗೋಲ, ಬಿ. ಗೋವಿಂದ, ಗುಡ್ಸಿ ನರಸರೆಡ್ಡಿ, ಶ್ರೀನಿವಾಸ ರೆಡ್ಡಿ, ಬಾಬುರಾವ್, ನರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.