ರಾಯಚೂರು, ಅ.4: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ಗೆಲುವಿಗಾಗಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ರಾಯಚೂರು ಗ್ರಾಮೀಣ ಕ್ಷೇತ್ರದ ವಿವಿಧೆಡೆ ಪ್ರಚಾರ ಕೈಗೊಂಡು ಶಿಕ್ಷಕರ ಬೆಂಬಲ ಕೋರಿದರು.
ತಾಲೂಕಿನ ಯಾಪಲದಿನ್ನಿ ಗ್ರಾಮದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ ಅವರು, ಶಿಕ್ಷಕರು ಹಾಗೂ ಉಪನ್ಯಾಸಕರೊಂದಿಗೆ ಮಾತುಕತೆ ನಡೆಸಿದರು. ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಶಿಕ್ಷಕರ ಸೇವಾ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಕುರಿತು ಅಭಿಪ್ರಾಯಗಳನ್ನು ಆಲಿಸಿದರು.
ಶಿಕ್ಷಕರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ವಿಧಾನ ಪರಿಷತ್ನಲ್ಲಿ ಪರಿಣಾಮಕಾರಿಯಾಗಿ ಧ್ವನಿಯಾಗಲು ಸಮರ್ಥ ಪ್ರತಿನಿಧಿತ್ವ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರಿಗೆ ಮತ ನೀಡಿ ಬೆಂಬಲಿಸಬೇಕೆಂದು ತಿಪ್ಪರಾಜು ಹವಾಲ್ದಾರ್ ಮನವಿ ಮಾಡಿದರು.
ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಶಿಕ್ಷಕರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕಾದರೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವ ಪ್ರತಿನಿಧಿಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ ಅವರು, ನಮೋಶಿ ಅವರ ಪರವಾಗಿ ಶಿಕ್ಷಕ ಮತದಾರರಲ್ಲಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚುತರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಜಗುರು, ಗಿಲ್ಲೇಸೂಗೂರು ಮಂಡಲ ಅಧ್ಯಕ್ಷ ಮಹಾಂತೇಶ ಮುಕ್ತಿ ಮಟಮಾರಿ, ಶಂಕರಗೌಡ ಮಿರ್ಜಾಪುರ, ಶರಣಪ್ಪ ನಾಮಾಲಿ, ಸುರೇಶಗೌಡ, ನವೀನ್ ಕುಮಾರ್, ಉಮೇಶ್ ಯಾಪಲದಿನ್ನಿ, ಸೂಗುರೆಡ್ಡಿಗೌಡ, ಪ್ರಕಾಶ್, ರಂಗಪ್ಪ ನಾಯಕ್, ರಜನಿಕಾಂತ್ ರೆಡ್ಡಿ, ಈರಣ್ಣ, ಜಾಕೀರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



