ರಾಯಚೂರು, ಸೆ.21: ಜಿಲ್ಲೆಯಲ್ಲಿ ಉಲ್ಬಣಿಸಿರುವ ಬರ ಪರಿಸ್ಥಿತಿಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕ ತಿಪ್ಪರಾಜು ಹಾವಲ್ದಾರ್ ನೇತೃತ್ವದಲ್ಲಿ ರಾಯಚೂರು ಗ್ರಾಮಾಂತರ ಬಿಜೆಪಿ ಘಟಕದಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಗ್ರಾಮಾಂತರ ಪ್ರದೇಶದ ರೈತರು ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳೊಂದಿಗೆ ಆಗಮಿಸಿ ಗಮನ ಸೆಳೆದರು. ಬಿಜೆಪಿ ಹಿರಿಯ ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು ಹಲಗಿ ಬಾರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಸಿಲನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ ರೈತರು, ಬರದಿಂದ ಉಂಟಾಗಿರುವ ಸಂಕಷ್ಟಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ತಿಪ್ಪರಾಜು ಹಾವಲ್ದಾರ್, ಮಳೆ ಕೊರತೆಯಿಂದ ರಾಯಚೂರು ಗ್ರಾಮಾಂತರ ಭಾಗದಲ್ಲಿ ಬೆಳೆಗಳು ಒಣಗುತ್ತಿದ್ದು, ಕೃಷಿಕರು ಮಾಡಿದ ಬಂಡವಾಳವೂ ಕೈಗೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ತುರ್ತಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮಾಂತರ ಭಾಗದಲ್ಲಿ ನೀರಾವರಿ ಸಮಸ್ಯೆಯೂ ಗಂಭೀರವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ತಡವಾಗಿ ಹರಿಸಿರುವುದರಿಂದ ಕಾಲುವೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪುತ್ತಿಲ್ಲ. ಗಣೇಕಲ್ ಜಲಾಶಯದಿಂದ ಕೊನೆಯ ಹಂತದ ಕಾಲುವೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸುವುದರ ಜೊತೆಗೆ ಎನ್ಆರ್ಬಿಸಿ ಕಾಲುವೆಗೂ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ರಾಜ್ಯದ ವಿವಿಧ ಭಾಗಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದರೂ, ಸ್ಥಳೀಯ ರೈತರ ಕೃಷಿ ಪಂಪ್ಸೆಟ್ಗಳಿಗೆ ಅಗತ್ಯ ಪ್ರಮಾಣದ ವಿದ್ಯುತ್ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, ಸದ್ಯ 5ರಿಂದ 6 ಗಂಟೆಗಳಷ್ಟು ಮಾತ್ರ ವಿದ್ಯುತ್ ಲಭ್ಯವಾಗುತ್ತಿದೆ. ಬೆಳೆ ಉಳಿಸಿಕೊಳ್ಳಲು ರೈತರಿಗೆ ದಿನಕ್ಕೆ ನಿರಂತರ 12 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಯಚೂರು ಭಾಗದಲ್ಲಿಯೇ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸ್ಥಳೀಯ ರೈತರು ವಿದ್ಯುತ್ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಇದು ‘ದೀಪದ ಬುಡದಲ್ಲೇ ಕತ್ತಲೆ’ ಎನ್ನುವ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದು ತಿಪ್ಪರಾಜು ಹಾವಲ್ದಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯುದ್ದಕ್ಕೂ ‘ರೈತರಿಗೆ ಸಮರ್ಪಕ ನೀರು ಒದಗಿಸಿ’, ‘12 ಗಂಟೆ ನಿರಂತರ ವಿದ್ಯುತ್ ನೀಡಿ’, ‘ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿ’, ‘ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಕಲ್ಪಿಸಿ’ ಎಂಬ ಘೋಷಣೆಗಳು ಮೊಳಗಿದವು.
ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ ಮಾತನಾಡಿ, ಕೃಷಿಕರು ಆರ್ಥಿಕವಾಗಿ ಸದೃಢರಾಗಿದ್ದಾಗ ಮಾತ್ರ ಗ್ರಾಮೀಣ ಆರ್ಥಿಕತೆಯೂ ಬಲವಾಗಿರುತ್ತದೆ. ರೈತರ ಸಂಕಷ್ಟವನ್ನು ಸರ್ಕಾರ ನಿರ್ಲಕ್ಷಿಸದೆ, ಅವರ ಬೇಡಿಕೆಗಳಿಗೆ ಸ್ಪಂದಿಸಿ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬರಪೀಡಿತ ಪ್ರದೇಶಗಳಲ್ಲಿ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸುವುದು, ಎಕರೆಗೆ ₹50 ಸಾವಿರ ಪರಿಹಾರ ನೀಡುವುದು, ಕೃಷಿ ಪಂಪ್ಸೆಟ್ಗಳಿಗೆ 12 ಗಂಟೆ ನಿರಂತರ ವಿದ್ಯುತ್ ಪೂರೈಸುವುದು, ಗಣೇಕಲ್ ಜಲಾಶಯ ಹಾಗೂ ಎನ್ಆರ್ಬಿಸಿ ಕಾಲುವೆಗಳಿಗೆ ಅಗತ್ಯ ನೀರು ಹರಿಸುವುದು, ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೂ ನೀರು ತಲುಪಿಸುವುದು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಶರಣಪ್ಪ, ಎನ್. ಕೇಶವರೆಡ್ಡಿ, ರವೀಂದ್ರ ಜಲ್ದಾರ್, ಮಹಾಂತೇಶ್, ನವೀನ್, ಜಗದೀಶ್, ಬಂಡೇಶ್, ಅಚ್ಚುತ್ ರೆಡ್ಡಿ, ಮಲ್ಲಿಕಾರ್ಜುನ, ರಂಗಪ್ಪ, ಖಾಸಿಂ ನಾಯಕ್ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.



