ರಾಯಚೂರು: ಹೋಟೆಲ್, ದಾಬಾ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ದಿಢೀರ್ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದ ಹಲವು ಆಹಾರ ಮಳಿಗೆಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಜಿಲ್ಲೆಯ ಒಟ್ಟು 103 ಸ್ಥಳಗಳಿಗೆ ಭೇಟಿ ನೀಡಿ ಆಹಾರ ತಯಾರಿಕೆ, ಸಂಗ್ರಹಣೆ ಹಾಗೂ ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.

ಪರಿಶೀಲನೆ ವೇಳೆ ಕೆಲವು ಹೋಟೆಲ್, ದಾಬಾ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆಯ ಕೊರತೆ, ನಿಷೇಧಿತ ಪದಾರ್ಥಗಳ ಬಳಕೆ, ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಿರುವುದು ಸೇರಿದಂತೆ ವಿವಿಧ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಬೆಳಕಿಗೆ ಬಂದಿದೆ. ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ ನೋಟಿಸ್ ಜಾರಿ ಮಾಡಿ, ಇಂತಹ ಲೋಪಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

60 ಕಡೆ ಮೊದಲ ತಂಡದ ತಪಾಸಣೆ

ಸೆ.9ರಿಂದ 11ರವರೆಗೆ ರಾಯಚೂರು ನಗರದ ಮಂತ್ರಾಲಯ ರಸ್ತೆ, ಲಿಂಗಸುಗೂರು ರಸ್ತೆ, ಹೈದರಾಬಾದ್ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಗದ್ವಾಲ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಶೀಲನಾ ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ರಾಯಚೂರಿನ ಆಹಾರ ಸುರಕ್ಷತಾ ಅಧಿಕಾರಿ, ಲಿಂಗಸುಗೂರಿನ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಸಹಾಯಕ ಔಷಧ ನಿಯಂತ್ರಣಾಧಿಕಾರಿ ನೇತೃತ್ವದ ಮೊದಲ ತಂಡವು 60 ಸ್ಥಳಗಳಲ್ಲಿ ತಪಾಸಣೆ ನಡೆಸಿತು.

ಈ ವೇಳೆ ಸ್ವಚ್ಛತಾ ಮಾನದಂಡ ಪಾಲಿಸದಿರುವುದು, ನಿಷೇಧಿತ ಪದಾರ್ಥಗಳನ್ನು ಬಳಸಿರುವುದು ಹಾಗೂ ಬಳಸಿದ ಅಡುಗೆ ಎಣ್ಣೆಯನ್ನು ಪುನಃ ಅಡುಗೆಗೆ ಉಪಯೋಗಿಸಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘನೆಯ ಸ್ವರೂಪಕ್ಕೆ ಅನುಗುಣವಾಗಿ 5 ಸಾವಿರ ರೂ.ದಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲಾಗಿದ್ದು, ಮೊದಲ ತಂಡದ ಕಾರ್ಯಾಚರಣೆಯಲ್ಲಿ ಒಟ್ಟು 53 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

ಉಲ್ಲಂಘನೆ ಕಂಡುಬಂದ ಆಹಾರ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ, ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

43 ಕಡೆ ಎರಡನೇ ತಂಡದ ಕಾರ್ಯಾಚರಣೆ

ಮಾನ್ವಿಯ ಆಹಾರ ಸುರಕ್ಷತಾ ಅಧಿಕಾರಿ ಬನದೇಶ್ವರ ಹಾಗೂ ರಾಯಚೂರಿನ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಉದಯಕಿಶೋರ್ ನೇತೃತ್ವದ ಎರಡನೇ ತಂಡವು 43 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ವೇಳೆ ವಿವಿಧ ಹೋಟೆಲ್, ದಾಬಾ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾಗಿದ್ದು, ಒಟ್ಟು 1.47 ಲಕ್ಷ ರೂ. ದಂಡ ವಿಧಿಸಲಾಗಿದೆ.

ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 8,357 ರೂ. ದಂಡ ವಿಧಿಸಲಾಗಿದೆ. ಇದೇ ರೀತಿ ಸೆ.18 ಮತ್ತು 19ರಂದು ದೇವದುರ್ಗದಲ್ಲಿಯೂ ವಿಶೇಷ ತಪಾಸಣೆ ನಡೆಸಿ 25,500 ರೂ. ದಂಡ ವಿಧಿಸಲಾಗಿದೆ.

ಈ ಕುರಿತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ. ಹಂಪಣ್ಣ ಸಜ್ಜನ್ ಪ್ರತಿಕ್ರಿಯಿಸಿ, “ಈ ತಿಂಗಳಲ್ಲಿ ರಾಯಚೂರು ನಗರದಲ್ಲಿ ಎರಡು ತಂಡಗಳ ಮೂಲಕ ತಪಾಸಣೆ ನಡೆಸಲಾಗಿದೆ. ದೇವದುರ್ಗದಲ್ಲಿಯೂ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹೋಟೆಲ್, ದಾಬಾ ಮತ್ತು ರೆಸ್ಟೋರೆಂಟ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.