ರಾಯಚೂರು, ಅ.3: ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತಿದ್ದು, ಅದರ ಪರಿಣಾಮ ಗ್ರಾಮೀಣ ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಾಗಿ ಬೀಳುತ್ತಿದೆ ಎಂದು ರಾಯಚೂರು ಸಂಸದ ಜಿ. ಕುಮಾರ್ ನಾಯಕ ಹೇಳಿದ್ದಾರೆ.
ಬೆಲೆ ಏರಿಕೆ ಹಾಗೂ ಹಣದುಬ್ಬರದ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ಅ.5ರಿಂದ 7ರವರೆಗೆ ಸಭೆ ನಡೆಸಲಿದ್ದು, ಹಣದುಬ್ಬರ ಮತ್ತು ಬಡ್ಡಿದರಗಳ ಕುರಿತು ಚರ್ಚಿಸಲಿದೆ. ಇಂತಹ ಆರ್ಥಿಕ ನೀತಿಗಳ ಚರ್ಚೆ ಕೇವಲ ವ್ಯವಹಾರ ವಲಯಕ್ಕೆ ಸೀಮಿತವಾಗದೆ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಬಿಐನ ಮುಂದಿನ ಎಂಪಿಸಿ ಸಭೆ ಅ.5ರಿಂದ 7ರವರೆಗೆ ನಡೆಯುವುದು ನಿಗದಿಯಾಗಿದೆ.
ಆಗಸ್ಟ್ 2026ರಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ.4.82ಕ್ಕೆ ಏರಿದ್ದು, ಆಹಾರ ಹಣದುಬ್ಬರ ಶೇ.5.95ರಷ್ಟಿದೆ. ಗ್ರಾಮೀಣ ಹಣದುಬ್ಬರ ಶೇ.5.23 ಇದ್ದರೆ, ನಗರ ಪ್ರದೇಶದಲ್ಲಿ ಶೇ.4.31 ದಾಖಲಾಗಿದೆ. ಹೀಗಾಗಿ ಬೆಲೆ ಏರಿಕೆಯ ಒತ್ತಡ ಗ್ರಾಮೀಣ ಕುಟುಂಬಗಳ ಮೇಲೆ ಹೆಚ್ಚಿರುವುದು ಅಂಕಿಅಂಶಗಳಿಂದಲೂ ಗೋಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಕುಟುಂಬಗಳ ಮಾಸಿಕ ವೆಚ್ಚವನ್ನು ಏರಿಸುತ್ತಿದೆ. ಮತ್ತೊಂದೆಡೆ ಸಗಟು ಮಾರುಕಟ್ಟೆಯಲ್ಲಿಯೂ ಬೆಲೆ ಒತ್ತಡ ಹೆಚ್ಚಿರುವುದರಿಂದ ಸಣ್ಣ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಸರಕು ಖರೀದಿಸಬೇಕಾಗಿದೆ. ಗ್ರಾಹಕರ ಮೇಲೆ ಸಂಪೂರ್ಣ ಹೊರೆ ವರ್ಗಾಯಿಸಲು ಸಾಧ್ಯವಾಗದೆ ವ್ಯಾಪಾರಿಗಳ ಲಾಭಾಂಶ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಮಾರ್ ನಾಯಕ ಆತಂಕ ವ್ಯಕ್ತಪಡಿಸಿದ್ದಾರೆ. ಆಗಸ್ಟ್ನಲ್ಲಿ ಸಗಟು ಹಣದುಬ್ಬರ ಶೇ.9.92ಕ್ಕೆ ಏರಿರುವುದಾಗಿ ಇತ್ತೀಚಿನ ವರದಿಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಸಂಘರ್ಷ, ಇಂಧನ ಬೆಲೆ ಹಾಗೂ ಹವಾಮಾನ ವೈಪರೀತ್ಯದಂತಹ ಕೆಲವು ಕಾರಣಗಳು ಸರ್ಕಾರದ ನೇರ ನಿಯಂತ್ರಣದಲ್ಲಿಲ್ಲ. ಆದರೆ ಆಹಾರ ಉತ್ಪಾದನೆ, ಸಂಗ್ರಹಣೆ, ಸಾಗಣೆ, ಶೀತಲೀಕರಣ ವ್ಯವಸ್ಥೆ ಹಾಗೂ ಮಾರುಕಟ್ಟೆ ನಿರ್ವಹಣೆಯನ್ನು ಬಲಪಡಿಸುವ ಮೂಲಕ ಜನರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ತಗ್ಗಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಬ್ಬು ಹಾಗೂ ಜೋಳವನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ಪ್ರಮಾಣವನ್ನು ಸದ್ಯದ ಪರಿಸ್ಥಿತಿಯಲ್ಲಿ ಮರುಪರಿಶೀಲಿಸಬೇಕು. ಸರ್ಕಾರದ ದಾಸ್ತಾನಿನಲ್ಲಿರುವ ಅಗತ್ಯ ಆಹಾರ ಪದಾರ್ಥಗಳನ್ನು ಗ್ರಾಮೀಣ ಹಾಗೂ ಬರಪೀಡಿತ ಪ್ರದೇಶಗಳಿಗೆ ತ್ವರಿತವಾಗಿ ತಲುಪಿಸಬೇಕು. ಆಹಾರ ಪದಾರ್ಥಗಳ ಪೋಲಾಗುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸಿ, ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಣ್ಣ ವ್ಯಾಪಾರಿಗಳಿಗೆ ಸುಲಭ ಸಾಲ ಮತ್ತು ಸಾಗಣೆ ವೆಚ್ಚ ತಗ್ಗಿಸುವ ನೆರವು ನೀಡುವುದರ ಜೊತೆಗೆ ಗ್ರಾಮೀಣ ಕುಟುಂಬಗಳಿಗೆ ಸ್ಥಿರ ಉದ್ಯೋಗ ಹಾಗೂ ಆದಾಯ ದೊರೆಯುವಂತೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದಾರೆ.
ಹಣಕಾಸು ಮತ್ತು ವಿತ್ತೀಯ ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಭಾರತೀಯ ಭಾಷೆಗಳಲ್ಲಿಯೂ ಜನರಿಗೆ ಸರಳವಾಗಿ ವಿವರಿಸಬೇಕು. ಬೆಲೆ ಏರಿಕೆಯ ವಾಸ್ತವ ಪರಿಣಾಮವನ್ನು ಮುಕ್ತವಾಗಿ ಚರ್ಚಿಸಿ, ನೀತಿ ರೂಪಿಸುವಾಗ ಬಡವರು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಕುಟುಂಬಗಳ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಸಬೇಕು ಎಂದು ಸಂಸದ ಜಿ. ಕುಮಾರ್ ನಾಯಕ ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.



