ತುಂಗ ಬಿಂಬ/ರಾಯಚೂರು, ಸೆ.18: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ಬಂಗಾರವಾಗಿಸುವುದರ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಶಿಲ್ಪಿಗಳಾಗಿದ್ದಾರೆ ಎಂದು ರಾಯಚೂರಿನ ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕ ಹೇಮರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿನಿಯರ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ತಮ್ಮ ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ನೀಡುವ ಜ್ಞಾನ, ಸಂಸ್ಕಾರ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರ ದಿನಾಚರಣೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವುದು ಅತ್ಯಂತ ಅರ್ಥಪೂರ್ಣ ಹಾಗೂ ಮಹತ್ವದ ಕಾರ್ಯವಾಗಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಚನ್ನಬಸವ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ಮಾತನಾಡಿ, ಕನ್ನಡ ವಿಭಾಗದ ವಿದ್ಯಾರ್ಥಿನಿಯರು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ಗುರು ವೃಂದಕ್ಕೆ ಗೌರವ ಸಲ್ಲಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
“ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಕರ ಮಾರ್ಗದರ್ಶನ ಸದಾ ಲಭ್ಯವಿರುತ್ತದೆ. ಅದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ಜ್ಯೋತಿ ಸಿ.ಕೆ., ಸಹ ಸಂಯೋಜಕ ಶರಣೇಗೌಡ, ಸಾಂಸ್ಕೃತಿಕ ಘಟಕದ ಸಂಯೋಜಕ ಡಾ. ಪ್ರಸನ್ನಕುಮಾರ್, ಸಿಬ್ಬಂದಿ ಕಾರ್ಯದರ್ಶಿ ಡಾ. ಸಾಯ್ಯದಾ ರಶೀದ್ ಪರ್ವೀನ್, ಸಹ ಪ್ರಾಧ್ಯಾಪಕ ರಂಗನಾಥ ಬಿಲ್ಲಾರ್, ಡಾ. ಉಮಾದೇವಿ, ಡಾ. ಸ್ವರೂಪರಾಣಿ, ಸುಮಿತ್ರಾ ಪ್ಯಾಟಿ, ಸರಸ್ವತಿ, ಆಸ್ಮಾ, ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ಅಳ್ಳಪ್ಪ, ಡಾ. ಪುಷ್ಪಾವತಿ, ಡಾ. ಪ್ರಕಾಶ್ ಬುದ್ದಿನ್ನಿ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನಾಗಮ್ಮ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಪ್ರಾರ್ಥನಾ ಗೀತೆ ಹಾಡಿದರು. ವೈಶಾಲಿ ಸ್ವಾಗತಿಸಿದರು. ತೇಜಸ್ವಿನಿ ವಂದಿಸಿದರು.



