ತುಂಗಾ ಬಿಂಬ/ರಾಯಚೂರು: ಜನರ ಸಂಕಷ್ಟ, ಸಮಸ್ಯೆಗಳು ಮತ್ತು ಆಶೋತ್ತರಗಳನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸಿ, ಅವುಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಾಜಮುಖಿ ಪತ್ರಿಕೋದ್ಯಮ ನಡೆಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು. ಹೈದ್ರಾಬಾದ್ ಕರ್ನಾಟಕ ದಿನಪತ್ರಿಕೆಯ ಕಚೇರಿಗೆ ಗುರುವಾರ ಭೇಟಿ ನೀಡಿದ ಅವರು, ಪತ್ರಿಕೆಯ ನೂತನ ವರ್ಣರಂಜಿತ ಮುದ್ರಣ ಘಟಕವನ್ನು ವೀಕ್ಷಿಸಿ ಸಂಸ್ಥೆಗೆ ಶುಭ ಹಾರೈಸಿದರು. ಆ.15ರಂದು ಪತ್ರಿಕೆಯನ್ನು ರಾಜ್ಯಮಟ್ಟದ ದಿನಪತ್ರಿಕೆಯಾಗಿಸುವ ಪ್ರಾರಂಭೋತ್ಸವ ಹಾಗೂ ನೂತನ ಮುದ್ರಾಲಯ ಉದ್ಘಾಟನೆ ನಡೆದಿದ್ದು, ಅನಿವಾರ್ಯ ಕಾರಣಗಳಿಂದ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು. ಮುದ್ರಾಲಯದಲ್ಲಿನ ಸಿಟಿಪಿ (CTP) ಯಂತ್ರ ಸೇರಿದಂತೆ ಆಧುನಿಕ ಮುದ್ರಣ ವ್ಯವಸ್ಥೆಯ ಕಾರ್ಯವಿಧಾನದ ಕುರಿತು ಮಾಹಿತಿ ಪಡೆದ ಬೋಸರಾಜು, ಹೈದ್ರಾಬಾದ್ ಕರ್ನಾಟಕ ಭಾಗದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ತಂತ್ರಜ್ಞಾನದಲ್ಲಿ ಮುನ್ನಡೆಯುವುದರ ಜೊತೆಗೆ ಪತ್ರಿಕೆ ಜನಪರ ಕಾಳಜಿಯನ್ನು ಉಳಿಸಿಕೊಳ್ಳಬೇಕು. ರೈತರು, ಕಾರ್ಮಿಕರು, ಬಡವರು ಹಾಗೂ ವಿವಿಧ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನರ ಗಮನಕ್ಕೆ ಬಾರದ ಅಥವಾ ಆಡಳಿತದ ಗಮನಕ್ಕೆ ತಲುಪದ ವಿಷಯಗಳನ್ನು ಬೆಳಕಿಗೆ ತಂದು ಪರಿಹಾರದ ದಿಕ್ಕಿನಲ್ಲಿ ಚರ್ಚೆ ಹುಟ್ಟುಹಾಕುವುದು ಪತ್ರಿಕೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸತ್ಯ, ವಾಸ್ತವ ಮತ್ತು ನಿರ್ಭೀತ ವರದಿಗಾರಿಕೆಗೆ ಆದ್ಯತೆ ನೀಡಿ ಜನರ ವಿಶ್ವಾಸ ಗಳಿಸುವ ಪತ್ರಿಕೆಯಾಗಿ ‘ಹೈದ್ರಾಬಾದ್ ಕರ್ನಾಟಕ’ ಮತ್ತಷ್ಟು ಬೆಳೆಯಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಪಿ. ಚನ್ನಬಸವ ಬಾಗಲವಾಡ ಹಾಗೂ ಸಂಸ್ಥೆಯ ಸಿಬ್ಬಂದಿ ಎನ್.ಎಸ್. ಬೋಸರಾಜು ಅವರನ್ನು ಸನ್ಮಾನಿಸಿ ಗೌರವಿಸಿದರು. ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪ ಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.