ತುಂಗ ಬಿಂಬ/ರಾಯಚೂರು: ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಶಾಂತಪ್ಪ ಅವರು ಸೆ.20ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಲಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಂಸದ ಕೆ. ಕುಮಾರನಾಯಕ, ವಸಂತಕುಮಾರ್, ಹಂಪನಗೌಡ ಬಾದರ್ಲಿ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಪಕ್ಷದ ಸಂಘಟನೆಯಲ್ಲಿ ಹೊಸತನ ತರುವುದರ ಜೊತೆಗೆ ತಳಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಎಐಸಿಸಿ ಮಟ್ಟದಲ್ಲಿ ಸಂಘಟನಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಅದರ ಭಾಗವಾಗಿಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ವಿಭಿನ್ನ ಮಾದರಿಯಲ್ಲಿ ನಡೆಸಲಾಗಿದೆ ಎಂದು ಶಾಂತಪ್ಪ ವಿವರಿಸಿದರು.

ಹಿಂದೆ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖವಾಗಿ ಸ್ಥಳೀಯ ಮುಖಂಡರ ಅಭಿಪ್ರಾಯಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಾಮಾನ್ಯ ಕಾರ್ಯಕರ್ತರಿಂದ ಆರಂಭಿಸಿ ಪಕ್ಷದ ಪ್ರಮುಖ ಮುಖಂಡರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯವನ್ನೂ ಸಂಗ್ರಹಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಎಐಸಿಸಿ ವೀಕ್ಷಕರಾಗಿ ಲಕ್ಷ್ಮೀಕಾಂತ್ ಅವರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಿದ್ದರು ಎಂದು ತಿಳಿಸಿದರು.

ಈ ಪ್ರಕ್ರಿಯೆಯ ಮೂಲಕ ತಮ್ಮ ಮೇಲೆ ವಿಶ್ವಾಸವಿಟ್ಟು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ ನೀಡಿರುವುದು ಸಂತೋಷ ತಂದಿದೆ ಎಂದ ಅವರು, ಕಳೆದ ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ಏಳು–ಎಂಟು ಮಂದಿ ಜಿಲ್ಲಾಧ್ಯಕ್ಷರೊಂದಿಗೆ ಪಕ್ಷದ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಆ ಅನುಭವವನ್ನು ಬಳಸಿಕೊಂಡು ಜಿಲ್ಲೆಯಾದ್ಯಂತ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಗೌರವ ನೀಡಲಾಗುವುದು. ಯಾವುದೇ ರೀತಿಯ ಗುಂಪುಗಾರಿಕೆ ಅಥವಾ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗಿಟ್ಟು ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡುತ್ತೇನೆ. ವೈಯಕ್ತಿಕ ಭಿನ್ನತೆಗಳಿಗಿಂತ ಪಕ್ಷದ ಹಿತವೇ ಮುಖ್ಯ. “ನಮ್ಮದು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷವೇ ನಮ್ಮ ಬಣ್ಣ” ಎಂಬ ಮನೋಭಾವದೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಸೆ.20ರಂದು ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸದ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಮಾತ್ರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಘಟಕದ ಇತರೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರಿಗಾಗಿ ಪ್ರತ್ಯೇಕ ಪದಗ್ರಹಣ ಸಮಾರಂಭ ನಡೆಸಲಾಗುವುದು ಎಂದು ಕೆ. ಶಾಂತಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಶಾಲಾಂ, ಜಯಂತ್ ರಾವ್ ಪತಂಗಿ, ಶಿವಮೂರ್ತಿ, ಮಾಡಗಿರಿ, ನರಸಿಂಹಲು, ಜಯಣ್ಣ, ಆಂಜನೇಯ, ಸಾಜಿದ್ ಸಮೀರ್, ಅಮರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.