ರಾಯಚೂರು, ಸೆ.20: ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೆಳಗಿಸುವವರೇ ಶಿಕ್ಷಕರು. ವ್ಯಕ್ತಿಯ ಯಶಸ್ಸಿನ ಹಿಂದೆ ಗುರುಗಳ ಮಾರ್ಗದರ್ಶನ ಮತ್ತು ಶ್ರಮ ಅಪಾರವಾಗಿದ್ದು, ಶಿಕ್ಷಣವು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ ವ್ಯಕ್ತಿಯ ಜ್ಞಾನ, ವ್ಯಕ್ತಿತ್ವ ಮತ್ತು ಸಂಸ್ಕಾರವನ್ನು ರೂಪಿಸುವ ಮಹತ್ವದ ಸಾಧನವಾಗಿದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ಕಲಾ ಸಂಕುಲ ಸಂಸ್ಥೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವು ಮಾನವನ ಸರ್ವತೋಮುಖ ಬೆಳವಣಿಗೆ ಹಾಗೂ ಸಮಾಜದ ಪ್ರಗತಿಗೆ ಭದ್ರ ತಳಹದಿಯಾಗಿದೆ. ಉತ್ತಮ ಶಿಕ್ಷಣವು ವ್ಯಕ್ತಿಗೆ ಸೂಕ್ತ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಿ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ. ಗುರು ಎಂದರೆ ಕೇವಲ ಅಕ್ಷರ ಕಲಿಸುವ ಶಿಕ್ಷಕನಲ್ಲ, ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನತ್ತ ಕರೆದೊಯ್ಯುವ ದಾರಿದೀಪ ಎಂದು ಹೇಳಿದರು.
ಲೌಕಿಕ ಶಿಕ್ಷಣ ಜೀವನ ಸಾಗಿಸಲು ದಾರಿ ತೋರಿಸಿದರೆ, ಗುರುವಿನ ಮಾರ್ಗದರ್ಶನ ಜೀವನದ ನಿಜವಾದ ಉದ್ದೇಶವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಸರಿ-ತಪ್ಪಿನ ವ್ಯತ್ಯಾಸವನ್ನು ತಿಳಿದು ಧರ್ಮ ಹಾಗೂ ಮೌಲ್ಯಗಳ ಮಾರ್ಗದಲ್ಲಿ ನಡೆಯಲು ಗುರುವಿನ ಪ್ರೇರಣೆ ಅತ್ಯವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಲು ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಕಲಾ ಸಂಕುಲ ಸಂಸ್ಥೆಯು ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಪರ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶಿಕ್ಷಕರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಿಕ್ಷಕರ ಸೇವೆಗೆ ಹೆಚ್ಚಿನ ಮೌಲ್ಯ ನೀಡುತ್ತವೆ. ನಿಸ್ವಾರ್ಥ ಸೇವೆಯನ್ನು ಗುರುತಿಸುವ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳು ನಿರಂತರವಾಗಿ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಿರುತೆರೆ ನಟಿ ರಜನಿ, ಪುಷ್ಪ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀದೇವಿ ಆರ್.ವಿ. ನಾಯಕ್, ಕೆಪಿಸಿಸಿ ಕಾರ್ಯದರ್ಶಿ ಕೆ. ಅಸ್ಲಾಂ ಪಾಷಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಸಾವಂತಗೆರೆ, ಜಿಲ್ಲಾ ಕಾರಾಗೃಹ ಇಲಾಖೆಯ ಅನಿತಾ ಹಿರೇಮನಿ, ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಗೌರವ ಅಧ್ಯಕ್ಷ ಬಿ. ಬಸವರಾಜ್, ಗೌರವ ಸಲಹೆಗಾರ ರಾಜಶೇಖರದಿನ್ನಿ, ಅಧ್ಯಕ್ಷ ಕೆ. ಅಯ್ಯಣ್ಣ ವಡವಾಟಿ, ಉಪಾಧ್ಯಕ್ಷ ವಿ. ಜಗದೀಶ್, ಪ್ರಧಾನ ಕಾರ್ಯದರ್ಶಿ ಡಿ. ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ ಇಡಪನೂರು, ಜಂಟಿ ಕಾರ್ಯದರ್ಶಿ ವಿರೂಪಾಕ್ಷಿ ಕೊರವಿಹಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಎನ್. ಶಿವಶಂಕರ ಹಾಗೂ ದೇವದುರ್ಗದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಇದೇ ವೇಳೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ನರೇಂದ್ರ ಮತ್ತು ಝಾನ್ಸಿ ರಾಣಿ ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಶಿವಲೀಲಾ ಬಿ. ಕಾರ್ಯಕ್ರಮ ನಿರೂಪಿಸಿದರು.



