ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಯು ಸೆ.16ರಂದು ರಾಯಚೂರಿನ ಸೇಂಟ್ ಥಾಮಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ರಾಯಚೂರಿನ ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜಿನ ಪುರುಷ ಹಾಗೂ ಮಹಿಳಾ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿವೆ.
ಪುರುಷರ ವಿಭಾಗದಲ್ಲಿ ಎಲ್ವಿಡಿ ಕಾಲೇಜಿನ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಶ್ವವಿದ್ಯಾಲಯ ಮಟ್ಟದ ಅಂತರ್ ಮಹಾವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಹಿಳಾ ವಿಭಾಗದಲ್ಲಿಯೂ ಕಾಲೇಜಿನ ತಂಡ ಉತ್ತಮ ಆಟ ಪ್ರದರ್ಶಿಸಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದೆ.
ವಿದ್ಯಾರ್ಥಿ ಕ್ರೀಡಾಪಟುಗಳ ಸಾಧನೆಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ತರಬೇತುದಾರರ ಕಾರ್ಯವನ್ನೂ ಆಡಳಿತ ಮಂಡಳಿ ಶ್ಲಾಘಿಸಿದೆ.
ಎಲ್ವಿಡಿ ಕಾಲೇಜಿನ ಕ್ರೀಡಾಪಟುಗಳ ಈ ಸಾಧನೆಯು ಕಾಲೇಜಿನ ಕ್ರೀಡಾ ಕ್ಷೇತ್ರದ ಪ್ರಗತಿಗೆ ಮತ್ತೊಂದು ಹೆಮ್ಮೆಯ ಗರಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವಂತಾಗಿದೆ.



