ತುಂಗಾ ಬಿಂಬ/ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ವಲಯ-1 ಮತ್ತು ವಲಯ-2 ಕಚೇರಿಗಳಲ್ಲಿ ಧ್ವಜಾರೋಹಣ, ಪುಷ್ಪ ನಮನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ನಗರದ ಸಿಟಿ ಟಾಕೀಸ್ ವೃತ್ತದಲ್ಲಿಯೂ ವಿಶೇಷ ಕಾರ್ಯಕ್ರಮ ನಡೆಸಿ ಮಹನೀಯರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ವಿಶಿಷ್ಟ ಇತಿಹಾಸ, ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಹೋರಾಟಗಳ ನೆಲವಾಗಿದೆ. ಈ ಭಾಗದ ವಿಮೋಚನೆ ಮತ್ತು ಅಭಿವೃದ್ಧಿಗಾಗಿ ಅನೇಕ ಮಹನೀಯರು ಹಾಗೂ ಸಾರ್ವಜನಿಕರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಉದ್ಯೋಗ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಅಗತ್ಯವಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಈ ಭಾಗದ ಸಮಗ್ರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಪಾಲಿಕೆ ಸಿಬ್ಬಂದಿ ಕೇವಲ ದಿನನಿತ್ಯದ ಕರ್ತವ್ಯ ನಿರ್ವಹಣೆಗೆ ಸೀಮಿತವಾಗದೆ, ನಗರದ ನೈಜ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರದ ಸ್ವಚ್ಛತೆ, ಹಸಿರೀಕರಣ ಹಾಗೂ ಸೌಂದರ್ಯೀಕರಣಕ್ಕೆ ನಿರಂತರ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ಶುಭಾಶಯ ಕೋರಿದ ಆಯುಕ್ತರು, ‘ಕಲ್ಯಾಣ’ ಎಂಬ ಆಶಯವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಸಾಕಾರಗೊಳಿಸಲು ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರು, ಆಡಳಿತಾಧಿಕಾರಿ, ವಲಯ-1 ಮತ್ತು ವಲಯ-2ರ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಯಚೂರು ಎನ್ಸಿಸಿ ಘಟಕದ ಸದಸ್ಯರು, ಮಾಜಿ ಸೈನಿಕರು, ಸಮುದಾಯ ಸಂಘಟಕರು ಹಾಗೂ ಆಸ್ತಿ ಮತ್ತು ನೀರಿನ ತೆರಿಗೆ ಸಂಗ್ರಹಣೆಯಲ್ಲಿ ತೊಡಗಿರುವ ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.



