ತುಂಗ ಬಿಂಬ/ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವನ್ನು ನಗರದ ಶ್ರೀ ಸಾಯಿಬಾಬಾ ಜನ ಮಂದಿರದಲ್ಲಿ ಮೋದಿ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಮೋದಿ ಅಭಿಮಾನಿ ಬಂಗಿ ಮುನಿರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಮತ್ತಷ್ಟು ಶಕ್ತಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಗಿ ಮುನಿರೆಡ್ಡಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷ ಸೇವೆ ಸಲ್ಲಿಸಿದ್ದು, 2014ರಿಂದ ದೇಶದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ಸುಮಾರು 25 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವಾ ಪಯಣ ನಡೆಸಿರುವುದು ವಿಶೇಷವಾಗಿದೆ ಎಂದು ಹೇಳಿದರು.

ದೇಶದ ಜನರನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸಿ, ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ತಿಳಿಸಿದರು. ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಭಾರತದ ಪ್ರಗತಿಗಾಗಿ ಪ್ರಧಾನಿ ಮೋದಿ ಅವರಿಗೆ ಇನ್ನಷ್ಟು ಆರೋಗ್ಯ ಮತ್ತು ಶಕ್ತಿ ನೀಡುವಂತೆ ಶ್ರೀ ಸಾಯಿಬಾಬಾರಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ಪ್ರಾರ್ಥನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ ಅಭಿಮಾನಿಗಳು, ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಮೋದಿ ಅಭಿಮಾನಿ ಬಂಗಿ ಮುನಿರೆಡ್ಡಿ, ಸ್ಥಾಯಿ ಧ್ಯಾನಮಂದಿರದ ಸಂಸ್ಥಾಪಕ ಸಾಯಿ ಕಿರಣ್ ಅದೋನಿ, ಜಿತೇಂದ್ರ ಕುಮಾರ್, ಆಕಾಶ್ ಸೇರಿದಂತೆ ಮೋದಿ ಅಭಿಮಾನಿಗಳು ಹಾಗೂ ಶ್ರೀ ಸಾಯಿಬಾಬಾ ಮಂದಿರದ ಭಕ್ತರು ಭಾಗವಹಿಸಿದ್ದರು.