ರಾಯಚೂರು: ನಗರದ ಎಲ್ಬಿಎಸ್ ನಗರದಲ್ಲಿರುವ ಶ್ರೀ ವೀರ ಹನುಮಾನ್ ದೇವಸ್ಥಾನ, ಚಂದ್ರಬಂಡಾ ರಸ್ತೆಯಲ್ಲಿ ಶ್ರೀ ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಓಂ ಗ್ರೂಪ್ ಅಸೋಸಿಯೇಷನ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ನಾಗರಾಜ ಭಾಲ್ಕಿ, “ಆರೋಗ್ಯವೇ ಭಾಗ್ಯ. ದೇವರು ನೀಡಿರುವ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜೊತೆಗೆ ರಾಯಚೂರು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯಾಧಿಕಾರಿ ಡಾ. ಅರುಣ್ ಮಸ್ಕಿ ಮಾತನಾಡಿ, ಆಸ್ಪತ್ರೆಗೆ ತೆರಳಲು ಸಾಧ್ಯವಾಗದವರಿಗೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಹಳ ಸಹಕಾರಿಯಾಗುತ್ತವೆ. ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರುಣ್ ಪಾಟೀಲ್ ಮಾತನಾಡಿ, ಓಂ ಗ್ರೂಪ್ ಅಸೋಸಿಯೇಷನ್ ವತಿಯಿಂದ ಆರೋಗ್ಯ ತಪಾಸಣೆಯ ಜೊತೆಗೆ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ. ಓಂಕಾರ ಯಾದವ ಮಾತನಾಡಿ, “ಸಮಾಜಮುಖಿ ಕಾರ್ಯಕ್ರಮಗಳ ಯಶಸ್ಸಿಗೆ ಸಾರ್ವಜನಿಕರ ಸಹಕಾರವೇ ಪ್ರಮುಖವಾಗಿದೆ. ಆರೋಗ್ಯ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಎಲ್ಲರೂ ಒಗ್ಗಟ್ಟಾಗಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸೋಣ” ಎಂದರು.
ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ. ಶುಶ್ರುತ್, ರಿಮ್ಸ್ ವೈದ್ಯೆ ಡಾ. ಶಿಲ್ಪಾ ದಿವಾಕರ, ವೈದ್ಯಾಧಿಕಾರಿ ಡಾ. ಸತೀಶ್, ಡಾ. ನಿಖಿಲ್, ಸೈಯದ್ ಕೌಸರ್ ಹುಸೇನ್, ವೈದ್ಯಾಧಿಕಾರಿ ಡಾ. ಅಲ್ಲಾಭಕ್ಷ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ರಿಮ್ಸ್ ಆಸ್ಪತ್ರೆ ರಾಯಚೂರು, ಭಾಲ್ಕಿ ಆಸ್ಪತ್ರೆ ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.
ಕಾರ್ಯಕ್ರಮದ ಆಯೋಜಕರಾದ ದೇವರಾಜ, ಸಿದ್ದನಗೌಡ, ಜಗದೀಶ, ಷಣ್ಮುಖ, ರಮೇಶ್, ಸಂತೋಷ, ವಿಶಾಲ, ಶರಣು, ಪೂಜಾ, ಶ್ರೀಶೈಲ್, ಚಂದ್ರು ಸೇರಿದಂತೆ ಎಲ್ಬಿಎಸ್ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮವನ್ನು ಶುಶ್ರೂಷಕ ಅಧಿಕಾರಿ ಮಲ್ಲಿಕಾರ್ಜುನ ನಾಯಕ ಬೂದಿನಾಳ ನಿರೂಪಿಸಿದರು.



