ತುಂಗಾ ಬಿಂಬ/ರಾಯಚೂರು: ಡಾ. ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಸಂಸ್ಥೆಯಿಂದ ಸಂಚಾಲಿತ ನಂದಿನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವವನ್ನು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಮೈದಾನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದ ಪ್ರಾಚಾರ್ಯೆ ಡಾ. ಆಲಿಸ್ ಜೋಸೆಫ್ ಮಾತನಾಡಿ, ಅನೇಕ ಹೋರಾಟಗಾರರ ತ್ಯಾಗ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದ ‘ಆಪರೇಷನ್ ಪೋಲೋ’ ಮೂಲಕ ಹೈದರಾಬಾದ್ ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು ಎಂದು ಹೇಳಿದರು. ವಿದ್ಯಾರ್ಥಿಗಳು 371(ಜೆ) ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾದ ಸಹಾಯಕ ಪ್ರಾಧ್ಯಾಪಕ ನರಸಿಂಹ ಹೊಸೂರು ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ರಜಾಕಾರರ ದೌರ್ಜನ್ಯ ಹಾಗೂ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸಿ, ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಂದನಾ, ಬಸವರಾಜೇಶ್ವರಿ, ರಮೇಶ್, ಎನ್. ರಾಜೇಶ್ವರಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬಸವರಾಜೇಶ್ವರಿ ಸ್ವಾಗತಿಸಿದರು, ವೀರಭದ್ರಯ್ಯ ವಿರಕ್ತಿಮಠ ವಂದಿಸಿದರು. ಡಾ. ಬಿ. ವಿಜಯ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.



