ತುಂಗ ಬಿಂಬ/ಮಂತ್ರಾಲಯ: ಅಪೋಲೋ ಆಸ್ಪತ್ರೆಗಳ ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಉಪಾಸನಾ ಕೊನಿಡಲಾ ಅವರು ಇಂದು ಸುಕ್ಷೇತ್ರ ಮಂತ್ರಾಲಯದ ಶ್ರೀಮಠಕ್ಕೆ ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ದರ್ಶನ ಪಡೆದರು. ಶ್ರೀಮಠಕ್ಕೆ ಆಗಮಿಸಿದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಉಪಾಸನಾ ಕೊನಿಡಲಾ ಅವರಿಗೆ ಫಲಮಂತ್ರಾಕ್ಷತೆ ನೀಡಿ, ಸ್ಮರಣಿಕೆ ಪ್ರದಾನ ಮಾಡಿ ಆಶೀರ್ವದಿಸಿದರು. ಭೇಟಿಯ ವೇಳೆ ಮಂತ್ರಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರು ಹಾಗೂ ಅಗತ್ಯವಿರುವ ಜನರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆಗಳು ದೊರೆಯುವಂತೆ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸುವ ಅಗತ್ಯದ ಕುರಿತು ಶ್ರೀ ಸುಬುಧೇಂದ್ರ ತೀರ್ಥರು ಚರ್ಚಿಸಿದರು. ಸುಕ್ಷೇತ್ರಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ, ಮೂಲ ಆರೋಗ್ಯ ಸೇವೆಗಳು ಹಾಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳ ಅಗತ್ಯತೆ ಕುರಿತು ಅವರು ಅಭಿಪ್ರಾಯ ಹಂಚಿಕೊಂಡರು. ಮಂತ್ರಾಲಯವು ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲದೆ, ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರ ಪ್ರಮುಖ ಯಾತ್ರಾಸ್ಥಳವಾಗಿರುವುದರಿಂದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸುವುದು ಕಾಲದ ಅಗತ್ಯವಾಗಿದೆ. ಭಕ್ತರು ಹಾಗೂ ಸುತ್ತಮುತ್ತಲಿನ ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಸಮರ್ಪಕ ವೈದ್ಯಕೀಯ ನೆರವು ದೊರೆಯುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯಿತು. ಶ್ರೀಮಠದ ಈ ಅಭಿಪ್ರಾಯಕ್ಕೆ ಶ್ರೀಮತಿ ಉಪಾಸನಾ ಕೊನಿಡಲಾ ಸಕಾರಾತ್ಮಕವಾಗಿ ಸ್ಪಂದಿಸಿ, ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಸಂಬಂಧಿಸಿದ ಮುಂದಿನ ಕ್ರಮಗಳಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದರು. ಶ್ರೀಮಠದ ಧಾರ್ಮಿಕ ಮತ್ತು ಸಮಾಜಮುಖಿ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಂತ್ರಾಲಯದಂತಹ ಪವಿತ್ರ ಕ್ಷೇತ್ರದಲ್ಲಿ ಭಕ್ತರ ಆರೋಗ್ಯ ರಕ್ಷಣೆಗೆ ಕೈಗೊಳ್ಳುವ ಪ್ರಯತ್ನಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.