ರಾಯಚೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಿರಿಯ ಅಲೆಮಾರಿ ಮುಖಂಡ ಸಣ್ಣ ಮಾರೇಪ್ಪ ಬುಡ್ಗ ಜಂಗಮ ಅವರನ್ನು ನೇಮಕ ಮಾಡಬೇಕೆಂದು ಕರ್ನಾಟಕ ನೈಜ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಒತ್ತಾಯಿಸಿದೆ. ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಆರ್. ರುದ್ರಾಕ್ಷಿ ನೇತೃತ್ವದ ನಿಯೋಗವು ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು, ಎ. ವಸಂತ್ ಕುಮಾರ್, ಮಾನ್ವಿ ಶಾಸಕ ಜಿ. ಹಂಪಯ್ಯ ನಾಯಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಶಾಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಸಣ್ಣ ಮಾರೇಪ್ಪ ಅವರು ಸುಮಾರು 40 ವರ್ಷಗಳಿಂದ ಅಲೆಮಾರಿ ಹಾಗೂ ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದು, ವಸತಿ, ಭೂಮಿ, ಉದ್ಯೋಗ ಹಾಗೂ ಆರ್ಥಿಕ ನೆರವು ಸೇರಿದಂತೆ ಸಮುದಾಯದ ಹಲವು ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿಯೂ ದೀರ್ಘಕಾಲ ಸೇವೆ ಸಲ್ಲಿಸಿರುವುದರಿಂದ ಅವರ ಸೇವೆಯನ್ನು ಪರಿಗಣಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ನಿಯೋಗ ಆಗ್ರಹಿಸಿತು. ನಿಯೋಗದಲ್ಲಿ ರಂಗಮುನಿದಾಸ್, ಜಂಬಣ್ಣ ಡೊಕ್ಕ, ಯಲ್ಲಪ್ಪ ವಿಭೂತಿ, ಜಗಪತಿ ಡೊಕ್ಕ, ಶಂಕರ್ ಎಡವಲಿ, ನರಸಿಂಹ ಗೋನವಾರ, ರಾಮು ಗೋನವಾರ, ಸೂಗಪ್ಪ ದೇವಸುಗೂರು ಸೇರಿದಂತೆ ಹಲವರು ಇದ್ದರು.



