ರಾಯಚೂರು: ನೈಸ್ ಯೋಜನೆಗೆ ಸಂಬಂಧಿಸಿದ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು, ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಹಾಗೂ ಹೋರಾಟಗಾರರ ಬಂಧನವನ್ನು ಖಂಡಿಸಿ ಸಿಪಿಐಎಂ ರಾಯಚೂರು ತಾಲೂಕು ಸಮಿತಿ ವತಿಯಿಂದ ಸೆ.18ರಂದು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ಜುಲೈ 29ರಂದು ಕರ್ನಾಟಕ ಹೈಕೋರ್ಟ್ ನೈಸ್ ಯೋಜನೆಗೆ ಸಂಬಂಧಿಸಿದ ಭೂಮಿಯನ್ನು ರೈತರಿಗೆ ಹಿಂದಿರುಗಿಸುವುದು ಹಾಗೂ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಆದೇಶ ನೀಡಿದೆ ಎಂದು ಪ್ರತಿಭಟನಾಕಾರರು ಹೇಳಿದ್ದು, ಆ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಾಲಯದ ಆದೇಶ ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ, ಪ್ರಧಾನ ಕಾರ್ಯದರ್ಶಿ ಯಶವಂತ, ಮುಖಂಡರಾದ ವೆಂಕಟಾಚಲಯ್ಯ, ಮಹಾಂತೇಶ ಸೇರಿದಂತೆ ಹಲವರ ವಿರುದ್ಧ ಬಂಧನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು. ರೈತರು ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟವನ್ನು ದಮನಿಸುವ ಬದಲು ಸರ್ಕಾರ ಅವರ ಬೇಡಿಕೆಗಳನ್ನು ಆಲಿಸಬೇಕು ಎಂದು ಹೇಳಿದರು.

ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡದಿರುವುದನ್ನು ಪ್ರಶ್ನಿಸಿದ ಅವರು, ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಬೇಕು. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ನೈಸ್ ಯೋಜನೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನೈಸ್ ಕಂಪನಿಗೆ ಸಂಬಂಧಿಸಿದ ಭೂಮಿಯನ್ನು ರೈತರಿಗೆ ಮರಳಿಸುವುದು ಹಾಗೂ ಟೋಲ್ ಸಂಗ್ರಹದ ಕುರಿತು ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೆಚ್. ಪದ್ಮಾ, ಡಿ.ಎಸ್. ಶರಣಬಸವ, ಕರಿಯಪ್ಪ ಅಚ್ಚೋಳಿ, ಈರಂಗನಗೌಡ, ಜಿಲಾನಿ ಪಾಷಾ, ಗೋಕಾರಮ್ಮ, ರಹೀಮತ್ ಬೇಗಂ, ಆಸ್ಮಾ, ಭಾಗ್ಯಮ್ಮ, ವೆಂಕಟಮ್ಮ, ವೆಂಕಟ ನರಸಮ್ಮ, ಶರಣಮ್ಮ, ರಾಮಪ್ಪ, ಕುಮಾರ್ ಜಲಾಲನಗರ ಸೇರಿದಂತೆ ಹಲವರು ಭಾಗವಹಿಸಿದ್ದರು.