ರಾಯಚೂರು, ಸೆ.19: ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ವಿವಿಧ ದಿನಪತ್ರಿಕೆಗಳ ಸಂಪಾದಕರ ಸಭೆ ಯಶಸ್ವಿಯಾಗಿ ನಡೆಯಿತು.
ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಂಪಾದಕರು ಅಗತ್ಯ ಸಲಹೆ-ಸೂಚನೆಗಳನ್ನು ನೀಡುವಂತೆ ಗಿಲ್ಡ್ ವತಿಯಿಂದ ಕೋರಲಾಯಿತು.
ಬೆಳ್ಳಿ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಕಥೆ ಮತ್ತು ಕವನಗಳನ್ನು ಒಳಗೊಂಡ ಸಾಹಿತ್ಯ ಕೃತಿ, ಜಿಲ್ಲೆಯ ಪ್ರಮುಖ ಹೋರಾಟಗಳ ಕುರಿತ ಪುಸ್ತಕಗಳು ಹಾಗೂ ಸ್ಮರಣ ಸಂಚಿಕೆ ಹೊರತರುವ ಯೋಜನೆಯ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಸಮಾರಂಭದ ಸಿದ್ಧತೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮನವಿ ಮಾಡಿದರು.
ಸಂಪಾದಕರಾದ ಸುಶೀಲೇಂದ್ರ ಸೋದೆಗಾರ, ಆರ್. ಗುರುನಾಥ್, ಚನ್ನಬಸವ ಬಾಗಲವಾಡ, ಶಿವಕುಮಾರ, ವಿಶ್ವನಾಥ ಸ್ವಾಮಿ, ವೀರಭದ್ರಪ್ಪ, ಮಹಾನಂದ, ಅಣ್ಣಪ್ಪ ಮೇಟಿಗೌಡ ಸೇರಿದಂತೆ ಹಲವರು ಬೆಳ್ಳಿ ಮಹೋತ್ಸವವನ್ನು ಸ್ಮರಣೀಯ ಹಾಗೂ ಅರ್ಥಪೂರ್ಣವಾಗಿಸಲು ವಿವಿಧ ಸಲಹೆಗಳನ್ನು ನೀಡಿದರು.
ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ದಿನಪತ್ರಿಕೆಗಳ ಸಂಪಾದಕರಾದ ಖಾನ್ ಸಾಬ್ ಮೋಮಿನ್, ಗಿರಿಧರ ಕುಲಕರ್ಣಿ, ಶಿವಮೂರ್ತಿ ಹಿರೇಮಠ, ಆನಂದ ವಿಕೆ, ಈರಪ್ಪ ಮಂಡಲಗೇರಾ, ಪ್ರಸನ್ನ ಜೈನ್, ಖ್ವಾಜಾ ಹುಸೇನ್, ಶ್ರೀನಿವಾಸ, ಗಿಲ್ಡ್ ಜಂಟಿ ಕಾರ್ಯದರ್ಶಿ ಶ್ರೀಕಾಂತ ಸಾವೂರು ಹಾಗೂ ಸದಸ್ಯರಾದ ಮಲ್ಲನಗೌಡ, ರಾಚಯ್ಯಸ್ವಾಮಿ, ಜಗನ್ನಾಥ ಪೂಜಾರಿ, ಭೀಮೇಶ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



