ರಾಯಚೂರು: ನಗರದ ಮಹಾಲಕ್ಷ್ಮಿ ಲೇಔಟ್ ಬಡಾವಣೆಯಲ್ಲಿ ಎಂ.ಎಲ್.ಎನ್. ಯೂತ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಏಳನೇ ದಿನದ ವಿಸರ್ಜನೆ ಅಂಗವಾಗಿ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಸಡಗರ-ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಹಿಳೆಯರು ಏಕರೂಪವಾಗಿ ಕೆಂಪು ಬಣ್ಣದ ಸೀರೆಗಳನ್ನು ಧರಿಸಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮಹಿಳೆಯರ ಏಕರೂಪದ ವೇಷಭೂಷಣಕ್ಕೆ ಬಡಾವಣೆಯ ಗುರು-ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಹಬ್ಬ-ಹರಿದಿನಗಳನ್ನು ಆಚರಿಸುವುದರಿಂದ ಬಡಾವಣೆಯಲ್ಲಿ ಸೌಹಾರ್ದತೆ, ಶ್ರದ್ಧೆ ಮತ್ತು ಭಕ್ತಿ ಹೆಚ್ಚುತ್ತದೆ ಎಂದು ಹಿರಿಯರು ಅಭಿಪ್ರಾಯಪಟ್ಟರು.

ಸಂಜೆ ಅದ್ಧೂರಿಯಾಗಿ ದೀಪೋತ್ಸವ ಕಾರ್ಯಕ್ರಮ ನಡೆಯಿತು. ನೂರಾರು ಸಾರ್ವಜನಿಕರು, ಮಹಿಳೆಯರು ಹಾಗೂ ಯುವತಿಯರು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಪ್ರಾರ್ಥಿಸಿ ದೀಪ ಬೆಳಗಿದರು. ಬಡಾವಣೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ನಾಗರಾಜ್, ಹನುಮಂತಪ್ಪ, ಶಂಕರ, ಪ್ರಭುಕುಮಾರ, ವಿರೂಪಾಕ್ಷಪ್ಪ ಪಲ್ಲಕ್ಕಿ, ಶ್ರೀಶೈಲ ಸೇರಿದಂತೆ ಹರ್ಷ ಗಜಾನನ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಬಡಾವಣೆಯ ನೂರಾರು ಭಕ್ತರು ಉಪಸ್ಥಿತರಿದ್ದರು.