ರಾಯಚೂರು: ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಕಾದಂಬರಿಕಾರ್ತಿ ಜಿ.ಎಂ. ರಾಜೇಶ್ವರಿ ಅವರಿಗೆ 2026-27ನೇ ಸಾಲಿನ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ.ಎಂ. ರಾಜೇಶ್ವರಿ, ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು.

ತಮ್ಮ ಕಾದಂಬರಿಗಳಲ್ಲಿ ಮಹಿಳೆಯ ತಾಳ್ಮೆ, ಸಮಾಧಾನ, ಬದುಕಿನ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸುವ ಮನೋಭಾವವನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಹಿರಿಯ ಸಾಹಿತಿಗಳ ಕಾದಂಬರಿಗಳಿಂದ ಸ್ಫೂರ್ತಿ ದೊರೆತಿದ್ದರೂ, ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನ ಹೋರಾಟವೇ ತಮ್ಮ ಬರವಣಿಗೆಗೆ ಪ್ರಮುಖ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಡಾ. ವಸುಂಧರಾ ಪಾಟೀಲ್ ಅವರು ಜಿ.ಎಂ. ರಾಜೇಶ್ವರಿ ಅವರ ಸಾಹಿತ್ಯ ಸಾಧನೆ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತೇಶ್ ಮಸ್ಕಿ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಗುಣ ಸಿದ್ದನಗೌಡ, ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ವಿಜಯ ರಾಜೇಂದ್ರ ಹಾಗೂ ಜಿಲ್ಲಾ ಕಸಾಪ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಜುನಾಥ್ ಕಾಮಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಸದಸ್ಯ ವಸಂತಕುಮಾರ ಕಾರ್ಯಕ್ರಮ ನಿರೂಪಿಸಿದರು. ದಂಡಪ್ಪ ಬಿರಾದಾರ್ ಸ್ವಾಗತಿಸಿದರು. ವೈ.ಕೆ. ಯಶೋಧ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ವೆಂಕಣ್ಣ ಯಾದವ್, ನಾಗಪ್ಪ ಹೊರಪೇಟಿ, ವಿ.ಎನ್. ಅಕ್ಕಿ, ರಾವುತರಾವ್ ಬರೂರ, ಪ್ರತಿಭಾ ಗೋನಾಳ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.