ರಾಯಚೂರು: ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹಾಗೂ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೀಮಾನಂದ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಿಂಧನೂರು ತಾಲೂಕಿನ ವೀರಾಪಪುರ ಗ್ರಾಮದ ಭೂ ಒಡೆತನ ಯೋಜನೆಯ ಫಲಾನುಭವಿಗಳ ಹೆಸರಿಗೆ ಪಹಣಿ ಮಾಡಿಕೊಡಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿಯ ಕರೆಯ ಮೇರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಅದರ ಅಂಗವಾಗಿ ರಾಯಚೂರು ನಗರದ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಪ್ರತಿಭಟನಾಕಾರರ ಪ್ರಕಾರ, ಆಗಸ್ಟ್ 4ರಂದು ದಲಿತ ಯುವ ಹೋರಾಟಗಾರ ಭೀಮಾನಂದ ಅವರ ಕೊಲೆ ಪ್ರಕರಣ, ಆಗಸ್ಟ್ 19ರಂದು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ನಲ್ಲಿ ಕಟ್ಟಿಗೆ ತರಲು ತೆರಳಿದ್ದ ರಾಣೆಮ್ಮ ಎಂಬ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿವೆ. ಈ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿ, ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡುವುದರ ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಅಥವಾ ಐದು ಎಕರೆ ಕೃಷಿ ಭೂಮಿ ನೀಡಬೇಕು. ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಿಂಧನೂರು ತಾಲೂಕಿನ ಗುಂಜಳ್ಳಿ ಹೋಬಳಿಯ ವೀರಾಪಪುರ ಗ್ರಾಮದ ದಲಿತರಿಗೆ ಭೂ ಒಡೆತನ ಯೋಜನೆಯಡಿ 2005-06ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಸರ್ವೆ ನಂ.184/*/5ರಲ್ಲಿ 9 ಎಕರೆ 7 ಗುಂಟೆ ಜಮೀನು ಮಂಜೂರಾಗಿದ್ದು, ಆಯ್ಕೆಯಾದ ಫಲಾನುಭವಿಗಳ ಹೆಸರಿಗೆ ಪಹಣಿ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. ಅಲ್ಲದೆ, ವೀರಾಪಪುರ ಗ್ರಾಮದ ಸರ್ವೆ ನಂ.118ರಲ್ಲಿ 1982ರಲ್ಲಿ ಮಂಜೂರಾದ ಭೂಮಿಯ ಪಟ್ಟಾ ಹಾಗೂ ಪಹಣಿಯಲ್ಲೂ ಫಲಾನುಭವಿಗಳ ಹೆಸರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್. ಪದ್ಮಾ, ಕೆ.ಜಿ. ವೀರೇಶ್, ಅಪ್ಪಣ್ಣ ಕಾಂಬಳೆ, ಬಸವಂತರಾಯಗೌಡ, ವೀರನಗೌಡ, ಕರಿಯಪ್ಪ ಅಚ್ಚೋಳಿ, ಕರಿಯಮ್ಮ ವೀರಾಪಪುರ, ಹುಸೇನಪ್ಪ ದಡೆಸೂಗೂರು, ನರಸಿಂಹಲು ವಡವಾಟಿ, ತಿಮಲಮ್ಮ, ನರಸಮ್ಮ, ಪಿ. ಯಲ್ಲಮ್ಮ, ಮಹಾದೇವಿ, ಜಮಲಮ್ಮ, ಶೇಖಮ್ಮ, ಹುಲಿಗೆಮ್ಮ, ಉತ್ತಮ್ಮ, ಸರೋಜಮ್ಮ, ನರಸಪ್ಪ, ಆನಂದ, ಶ್ರೀನಿವಾಸ, ಗಂಗಮ್ಮ, ದೇವಕಮ್ಮ, ತಾಯಮ್ಮ, ತಿಪ್ಪಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.



