ರಾಯಚೂರು, ಸೆ.21: ಗಡಿಭಾಗಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಜೈನ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮಿತ್ರಕೂಟ ರಾಯಚೂರು ಹಾಗೂ ಗಡಿನಾಡು ಕನ್ನಡ ಸಂಘ, ಕೃಷ್ಣ ಇವರ ಸಹಯೋಗದಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸೆ.23ರಂದು ಬೆಳಿಗ್ಗೆ 10.30ಕ್ಕೆ ಕೃಷ್ಣದಲ್ಲಿರುವ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗಡಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಶಿಕ್ಷಣದ ಬಗ್ಗೆ ಮತ್ತಷ್ಟು ಉತ್ಸಾಹ ಹಾಗೂ ಆತ್ಮವಿಶ್ವಾಸ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಕನ್ನಡ ಶಾಲೆಗಳತ್ತ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆಸಕ್ತಿ ಹೆಚ್ಚಿಸುವ ಆಶಯವೂ ಕಾರ್ಯಕ್ರಮದ ಹಿಂದಿದೆ ಎಂದರು.

ಸಮಾರಂಭವನ್ನು ಅಶೋಕ್ ಕುಮಾರ್ ಸಿ.ಕೆ. ಜೈನ್ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಮುಖ್ಯಗುರು ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೂಸಗಿ ಹಾಗೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶರಣಿಕ ಕುಮಾರ ದೋಖಾ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗಡಿನಾಡು ಕನ್ನಡ ಸಂಘದ ಸಲಹಾ ಸಮಿತಿ ಸದಸ್ಯ ಮಲ್ಲನಗೌಡ, ಗ್ಯಾರೆ ನರಸಿಂಹಯ್ಯ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗಡಿಭಾಗದಲ್ಲಿನ ಕನ್ನಡಿಗರು ಭಾಷೆ, ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಅವರ ಬೇಡಿಕೆಗಳಿಗೆ ಆದ್ಯತೆಯಿಂದ ಸ್ಪಂದಿಸಬೇಕಾಗಿದೆ. ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದರ ಜೊತೆಗೆ 371(ಜೆ) ಸೌಲಭ್ಯಗಳ ಸಮರ್ಪಕ ಅನುಷ್ಠಾನ ಹಾಗೂ ಗಡಿಭಾಗದ ಕನ್ನಡ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಶಾಲೆಗಳ ಸ್ಥಿತಿಗತಿ ಹಾಗೂ ಗಡಿಭಾಗದ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಹೋರಾಟ ರೂಪಿಸಲಾಗುವುದು. ಕೇವಲ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಷ್ಟೇ ಅಲ್ಲದೆ, ಕನ್ನಡ ಮಾಧ್ಯಮ ಶಿಕ್ಷಣದ ಬಲವರ್ಧನೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ರಾಮಲಿಂಗಪ್ಪ, ಗಡಿಭಾಗದಲ್ಲಿ ಕನ್ನಡ ಪರ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಅನುದಾನ ಲಭ್ಯವಾಗುತ್ತಿದ್ದರೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಭಾಷೆ, ಶಾಲೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಹೊಸಮನಿ, ರುದ್ರಯ್ಯ ಗುಣರಿ, ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.