ರಾಯಚೂರು, ಸೆ.21: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯಲ್ಲಿ ನಿರಂತರ ಸರ್ವರ್ ಸಮಸ್ಯೆ ಎದುರಾಗುತ್ತಿರುವುದರಿಂದ ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿ ವಿತರಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ಕನಿಷ್ಠ 2ರಿಂದ 3 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಎಚ್. ಸತ್ಯರಾಜ ಒತ್ತಾಯಿಸಿದ್ದಾರೆ.

ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅವರು, ಸರ್ಕಾರ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿರುವುದು ಸರಿಯೇ ಆದರೂ, ತಾಂತ್ರಿಕ ಅಡಚಣೆಗಳಿಂದ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸರ್ವರ್ ನಿಧಾನಗತಿಯ ಕಾರಣ ದಿನಕ್ಕೆ ಕೇವಲ 5ರಿಂದ 10 ಪಡಿತರ ಚೀಟಿಗಳ ಇ-ಕೆವೈಸಿ ಮಾತ್ರ ಪೂರ್ಣಗೊಳ್ಳುತ್ತಿದೆ. ಇದರಿಂದ ಸಾರ್ವಜನಿಕರು ದೀರ್ಘಕಾಲ ಕಾಯಬೇಕಾಗುತ್ತಿದ್ದು, ಕೆಲವೆಡೆ ಪಡಿತರದಾರರು ಮತ್ತು ವಿತರಕರ ನಡುವೆ ಮಾತಿನ ಚಕಮಕಿ ಉಂಟಾಗುತ್ತಿದೆ. ತಾಂತ್ರಿಕ ದೋಷಗಳಿಗೆ ವಿತರಕರನ್ನೇ ಹೊಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅವರ ಮೇಲೂ ಅನಗತ್ಯ ಒತ್ತಡ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಯಚೂರು ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಇದೇ ಸಮಸ್ಯೆ ಎದುರಾಗುತ್ತಿರುವುದರಿಂದ ಇ-ಕೆವೈಸಿ ಪ್ರಕ್ರಿಯೆಯ ಗಡುವನ್ನು ತಕ್ಷಣ ವಿಸ್ತರಿಸಬೇಕು. ಜೊತೆಗೆ ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಿ ಯಾವುದೇ ಅಡಚಣೆ ಇಲ್ಲದೆ ಸಾರ್ವಜನಿಕರು ಇ-ಕೆವೈಸಿ ಮಾಡಿಸಿಕೊಳ್ಳುವಂತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳು ಬಗೆಹರಿಯುವ ಮುನ್ನವೇ ಗಡುವು ವಿಧಿಸುವುದರಿಂದ ಹಲವಾರು ಅರ್ಹ ಪಡಿತರ ಚೀಟಿದಾರರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯು ಪ್ರಾಯೋಗಿಕ ಪರಿಸ್ಥಿತಿಯನ್ನು ಪರಿಗಣಿಸಿ ಸಾರ್ವಜನಿಕರಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೆಗ್ಲಿ ಉರುಕುಂದಪ್ಪ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.