ರಾಯಚೂರು: ನಗರದ ವಾರ್ಡ್ ನಂ.13ರ ಜಹೀರಾಬಾದ್ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಟ್ರಾಕ್ಟರ್ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಮೂರು ಪರಿಶಿಷ್ಟ ಜಾತಿ ಕುಟುಂಬಗಳಿಗೆ ತಕ್ಷಣ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಭೀಮ್ ಆರ್ಮಿ ಹಾಗೂ ಡಿಎಸ್ಎಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸೆ.18ರಂದು ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಶ್ರೀನಿವಾಸ ಅವರ 12 ವರ್ಷದ ಪುತ್ರ ಸುಚಿತ್ಕುಮಾರ ಹಾಗೂ ಜಮೇಶ ಅವರ 13 ವರ್ಷದ ಪುತ್ರ ಚರಣ್ಕುಮಾರ ಮೃತಪಟ್ಟಿದ್ದಾರೆ. ಮುಷ್ಕರು ಹನುಮಂತ ಅವರ 35 ವರ್ಷದ ಪುತ್ರ ವಿಜಯಕುಮಾರ ಗಂಭೀರವಾಗಿ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂತ್ರಸ್ತ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ, ಭೂರಹಿತ ದಿನಗೂಲಿ ಕಾರ್ಮಿಕ ಕುಟುಂಬಗಳಾಗಿವೆ. ಆದ್ದರಿಂದ ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ತಲಾ ₹10 ಲಕ್ಷ ಹಾಗೂ ಗಾಯಾಳು ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಸಿಎಸ್ಆರ್ ಹಾಗೂ ಸರ್ಕಾರದ ವಿವಿಧ ನಿಧಿಗಳ ಮೂಲಕ ಒದಗಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ವಿಜಯಕುಮಾರ ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಕಲ್ಪಿಸಬೇಕು. ಅಲ್ಲದೆ, ಸಂತ್ರಸ್ತ ಮೂರು ಕುಟುಂಬಗಳಿಗೆ ಮನೆ, ಹಕ್ಕುಪತ್ರ ಹಾಗೂ ಕೃಷಿ ಜಮೀನು ಮಂಜೂರು ಮಾಡಬೇಕು. ಮೃತಪಟ್ಟ ಮಕ್ಕಳ ಕುಟುಂಬದ ತಲಾ ಒಬ್ಬ ಸದಸ್ಯರಿಗೆ ಉದ್ಯೋಗಾವಕಾಶ ನೀಡುವುದರ ಜೊತೆಗೆ ಅರ್ಹ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಕರಣವನ್ನು ತುರ್ತು ವಿಷಯವೆಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಸಂತ್ರಸ್ತ ಕುಟುಂಬಗಳ ಸ್ಥಿತಿಗತಿ ಅವಲೋಕಿಸಿ ಏಳು ದಿನಗಳೊಳಗೆ ಅಗತ್ಯ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಡಿಎಸ್ಎಸ್ ಯೂತ್ ಅಧ್ಯಕ್ಷ ಜಯರಾಜ್, ರಮೇಶ್ ಯಾರಾಮರಸ್, ಉಮೇಶ್ ಹಾಗೂ ನಾಗರಾಜ್ ಆಗ್ರಹಿಸಿದ್ದಾರೆ.



