ಮಂತ್ರಾಲಯ: ಭಾದ್ರಪದ ಶುಧ್ಧ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ಸುದರ್ಶನ ಹೋಮ ಹಾಗೂ ತಪ್ತ ಮುದ್ರಾಧಾರಣೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.
ವೇದಮಂತ್ರಗಳ ಘೋಷದ ಮಧ್ಯೆ ಸಂಪ್ರದಾಯಬದ್ಧವಾಗಿ ಶ್ರೀ ಸುದರ್ಶನ ಹೋಮವನ್ನು ನೆರವೇರಿಸಲಾಯಿತು. ಭಕ್ತರ ಕ್ಷೇಮ, ಶಾಂತಿ, ಸಮೃದ್ಧಿ ಹಾಗೂ ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ನಂತರ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು. ಶ್ರೀಮಠದ ಶಿಷ್ಯರು, ಸ್ಥಳೀಯ ಭಕ್ತರು ಹಾಗೂ ಶ್ರೀಮಠದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಪೂರ್ವಕವಾಗಿ ತಪ್ತ ಮುದ್ರಾಧಾರಣೆ ಸ್ವೀಕರಿಸಿ ಶ್ರೀಗಳ ಆಶೀರ್ವಾದ ಪಡೆದರು.
ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಆವರಣವು ವೇದಘೋಷ, ಮಂತ್ರೋಚ್ಚಾರಣೆ ಹಾಗೂ ಭಕ್ತರ ನಾಮಸ್ಮರಣೆಯಿಂದ ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು.
ಭಾದ್ರಪದ ಶುಧ್ಧ ಏಕಾದಶಿಯ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡ ಭಕ್ತರು ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು.



