ರಾಯಚೂರು, ಸೆ.22: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭೂಮಾನಂದ ಕೊಲೆ ಪ್ರಕರಣ ಸೇರಿದಂತೆ ದಲಿತರ ಮೇಲಿನ ಮೂರು ಗಂಭೀರ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ, ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ದಲಿತ ಮುಖಂಡರ ನಿಯೋಗ ಗೃಹ ಸಚಿವರನ್ನು ಒತ್ತಾಯಿಸಿದೆ.
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ, ಹೊಕ್ರಾಣಿ ಗ್ರಾಮದ ಅಶ್ವಿನಿ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ದಲಿತಪರ ಸಂಘಟನೆಗಳು ಕಳೆದ ಕೆಲವು ದಿನಗಳಿಂದ ಆಗ್ರಹಿಸುತ್ತಿವೆ. ಈ ಸಂಬಂಧ ರಾಯಚೂರಿನಲ್ಲಿ ಪ್ರತಿಭಟನೆಗಳೂ ನಡೆದಿವೆ.
ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ಕುರಿತು ನಡೆದ ಹೋರಾಟದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಹಾಗೂ ಮಾಜಿ ಸಚಿವ ಎನ್.ಎಸ್. ಬೋಸರಾಜ್ ಅವರ ನೇತೃತ್ವದಲ್ಲಿ ತೆರಳಿದ ನಿಯೋಗವು ಗೃಹ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದೆ ಎಂದು ನಿಯೋಗದ ಮುಖಂಡರು ತಿಳಿಸಿದ್ದಾರೆ.
ಪ್ರಕರಣಗಳ ತನಿಖೆಯನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿದ್ದರೂ ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಸಮಗ್ರ ತನಿಖೆ ನಡೆಯುತ್ತಿಲ್ಲ ಎಂಬ ಅಹವಾಲನ್ನು ನಿಯೋಗವು ಸಚಿವರ ಗಮನಕ್ಕೆ ತಂದಿದೆ. ಯಾವುದೇ ರಾಜಕೀಯ ಪ್ರಭಾವಕ್ಕೆ ಅವಕಾಶ ನೀಡದೆ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ಪ್ರಕರಣಗಳ ಸತ್ಯಾಸತ್ಯತೆಯನ್ನು ಹೊರತರುವಂತೆ ಆಗ್ರಹಿಸಲಾಗಿದೆ.
ಭೂಮಾನಂದ ಕೊಲೆ ಪ್ರಕರಣದ ಜೊತೆಗೆ ಅಶ್ವಿನಿ ಹಾಗೂ ರಾಣೆಮ್ಮ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಿಯೋಗ ಮನವಿ ಮಾಡಿದೆ. ರಾಣೆಮ್ಮ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
ನಿಯೋಗದ ಪ್ರಕಾರ, ಅವರ ಅಹವಾಲುಗಳನ್ನು ಆಲಿಸಿದ ಗೃಹ ಸಚಿವರು ಪ್ರಕರಣಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತನಿಖೆಯಲ್ಲಿ ವಿಳಂಬವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್. ಮಾರೆಪ್ಪ ವಕೀಲರು, ರವೀಂದ್ರನಾಥ್ ಪಟ್ಟಿ, ಅಂಬಣ್ಣ ಅರೋಲಿಕರ್, ಶಿವರಾಯ ಅಕ್ಕರಕಿ, ಹೇಮರಾಜ್ ಅಸ್ಕಿಹಾಳ್, ಶರಣಪ್ಪ ದಿನ್ನಿ, ಬೂದೆಪ್ಪ ಕ್ಯಾದಿಗಿ, ಬಸವರಾಜ್ ಮಿಯಾಪುರ, ಬಸವರಾಜ್ ಹದ್ದಿನಾಳ್, ಅರ್ಜುನ್ ಜಗಲಿ, ನರಸಿಂಹಲು ನೆಲಹಾಳ್, ನರಸಿಂಹಲು ಮರ್ಚಟಾಳ್, ಬಸವರಾಜ್ ಭಂಡಾರಿ, ವಸಂತ್ ಅಸ್ಕಿಹಾಳ್ ಹಾಗೂ ತಾಯಪ್ಪ ಗದಾರ್ ಉಪಸ್ಥಿತರಿದ್ದರು.



