ರಾಯಚೂರು, ಸೆ.22: ಮಲಿಯಾಬಾದ್ ಕ್ಯಾಂಪ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ರಚಿಸಲಾಯಿತು.
ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಗ್ರಾಮದ ಪಾಲಕರು ಸಕ್ರಿಯವಾಗಿ ಭಾಗವಹಿಸಿ ಒಟ್ಟು 9 ಮಂದಿ ಸದಸ್ಯರನ್ನು ಆಯ್ಕೆ ಮಾಡಿದರು. ಸಮಿತಿಯ ಅಧ್ಯಕ್ಷರಾಗಿ ಸುಜಾತಮ್ಮ, ಗಂಡ ವೀರೇಶ ಅವರನ್ನು ಆಯ್ಕೆ ಮಾಡಲಾಗಿದ್ದು, ಉಳಿದ ಎಂಟು ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಆಗಮಿಸಿದ್ದ ಇಸಿಒ ರಾಮಕೃಷ್ಣ ಅವರು ಎಸ್ಡಿಎಂಸಿ ರಚನೆಯ ಉದ್ದೇಶ, ಸಮಿತಿಯ ಜವಾಬ್ದಾರಿಗಳು ಹಾಗೂ ಶಾಲೆಯ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಮಿತಿಯ ಪಾತ್ರದ ಕುರಿತು ಸವಿವರವಾಗಿ ಮಾಹಿತಿ ನೀಡಿದರು.
ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು ಹಾಗೂ ಅಗತ್ಯ ಮೂಲಸೌಕರ್ಯಗಳ ಸುಧಾರಣೆಗೆ ಎಸ್ಡಿಎಂಸಿ ಮತ್ತು ಪಾಲಕರು ಸಕ್ರಿಯವಾಗಿ ಸಹಕರಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಶಾಲೆಯ ಮುಖ್ಯಗುರು ಹಾಜಿಮಲನ್, ನಿವೃತ್ತ ಶಿಕ್ಷಕ ರೇವಣಸಿದ್ದಣ್ಣ ಗರಡಿ, ಶಿಕ್ಷಕ ಹನುಮಂತಪ್ಪ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶಾಲಾ ಸಿಬ್ಬಂದಿ ಶುಭ ಹಾರೈಸಿದರು. ಶಾಲೆಯ ಅಭಿವೃದ್ಧಿಗೆ ಪಾಲಕರು, ಶಿಕ್ಷಕರು ಮತ್ತು ಎಸ್ಡಿಎಂಸಿ ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.



