ರಾಯಚೂರು, ಸೆ.22: ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಈರಣ್ಣ ಕೋಸಿಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಿರಂತರ ಆ್ಯಪ್ನಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ದಿನಕ್ಕೆ ಒಂದು ಬಾರಿ ಮಾತ್ರ ದಾಖಲಿಸಲು ಅವಕಾಶ ನೀಡಬೇಕು. ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ಹಾಜರಾತಿ ದಾಖಲಿಸಲು ಸಮಯಾವಕಾಶ ಕಲ್ಪಿಸಬೇಕು. ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ನಿರಂತರ ಆ್ಯಪ್ನಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸುವುದರಿಂದ ವಿನಾಯಿತಿ ನೀಡಬೇಕು. ಕಾಮ್ಸ್ನಲ್ಲಿ ನಿಯೋಜನೆಗೊಂಡಿರುವ ಅಥವಾ ಎರವಲು ಸೇವೆಯಲ್ಲಿರುವ ಶಿಕ್ಷಕರ ಮಾಹಿತಿಯನ್ನು ಸೇರಿಸಬೇಕು ಎಂದು ತಾಲೂಕು ಅಧ್ಯಕ್ಷ ಕೆ. ರಾಮು ಗಾಣಧಾಳ್ ಒತ್ತಾಯಿಸಿದರು.
ಶಿಕ್ಷಕರ 10, 15, 20, 25 ಹಾಗೂ 30 ವರ್ಷಗಳ ಕಾಲಮಿತಿ ಬಡ್ತಿ ಮತ್ತು ವಿಶೇಷ ವೇತನ ಬಡ್ತಿಗಳನ್ನು ಆಯಾ ತಿಂಗಳಲ್ಲಿಯೇ ಸೇವಾ ಪುಸ್ತಕ ಹಾಗೂ ಎಚ್ಆರ್ಎಂಎಸ್ನಲ್ಲಿ ದಾಖಲಿಸಬೇಕು. ಸೇವಾ ಪುಸ್ತಕದಲ್ಲಿ ಇದುವರೆಗೆ ದಾಖಲಾಗಿರುವ ಎಲ್ಲ ಗಳಿಕೆ ರಜೆಗಳನ್ನು ಸಂಬಂಧಪಟ್ಟ ಶಿಕ್ಷಕರ ಎಚ್ಆರ್ಎಂಎಸ್ನಲ್ಲಿ ಸೇರಿಸಿ ನವೀಕರಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಕಲ್ಪಿಸಲು ಶೀಘ್ರದಲ್ಲಿಯೇ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಬೇಕು. ವರ್ಗಾವಣೆ ಹಾಗೂ ಬಡ್ತಿ ಪಡೆದ ಶಿಕ್ಷಕರ ಎಚ್ಆರ್ಎಂಎಸ್ನಲ್ಲಿ ಇನ್ನೂ ಹಿಂದಿನ ಶಾಲೆಯ ಹೆಸರೇ ತೋರಿಸುತ್ತಿದ್ದು, ಅದನ್ನು ಸರಿಪಡಿಸಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಹೆಸರನ್ನು ನವೀಕರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮುಂದೆ ನಡೆಯಲಿರುವ ಶಿಕ್ಷಣ ಅದಾಲತ್ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಲು ಅವಕಾಶ ಕಲ್ಪಿಸಬೇಕು. ವಿವಿಧ ಎನ್ಜಿಒ ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಪಾಠ ಬೋಧನೆಯನ್ನು ಅವಲೋಕಿಸುತ್ತಿರುವುದರಿಂದ ಶಿಕ್ಷಕರಿಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ. ಹೀಗಾಗಿ ಯಾವುದೇ ಎನ್ಜಿಒ ಅಥವಾ ಇತರೆ ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಮುನ್ನ ಸಂಬಂಧಪಟ್ಟ ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಇದರೊಂದಿಗೆ ಶಿಕ್ಷಕರ ವೈದ್ಯಕೀಯ ಮರುಪಾವತಿ ಬಿಲ್ಲುಗಳನ್ನು ವಿಳಂಬ ಮಾಡದೆ ಆದಷ್ಟು ಶೀಘ್ರ ವಿಲೇವಾರಿ ಮಾಡಬೇಕು ಎಂಬ ಬೇಡಿಕೆಯನ್ನೂ ಸಂಘದ ಪದಾಧಿಕಾರಿಗಳು ಮುಂದಿಟ್ಟರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ. ರಾಮು ಗಾಣಧಾಳ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ನಿಕಟಪೂರ್ವ ತಾಲೂಕು ಅಧ್ಯಕ್ಷ ಮಲ್ಲೇಶ ನಾಯಕ, ಎನ್ಜಿಒ ಪ್ರಧಾನ ಕಾರ್ಯದರ್ಶಿ ಭೀಮೇಶ ನಾಯಕ, ಖಜಾಂಚಿ ಪ್ರಸನ್ನಕುಮಾರ, ಸಂಘದ ಪ್ರಧಾನ ಕಾರ್ಯದರ್ಶಿ ಆನಂದಕುಮಾರ ಗಾಜರಾಳ, ಗೌರವಾಧ್ಯಕ್ಷ ರಂಗನಾಥ, ಉಪಾಧ್ಯಕ್ಷರಾದ ಪಾಂಡುರಂಗ ಕುರ್ಡಿಕರ್, ಶಂಷಾದ ಬೇಗಂ, ಖಜಾಂಚಿ ನೂರ ಉಲ್ ಹಕ್, ಸಹ ಕಾರ್ಯದರ್ಶಿಗಳಾದ ಶಿವರಾಜ್, ರತ್ನ ಹಾದಿಮನಿ, ಸಂಘಟನಾ ಕಾರ್ಯದರ್ಶಿಗಳಾದ ಸೂಗುರೇಶ, ಸುನಿತಾ ಹಾಗೂ ಮುಖಂಡರಾದ ತನುಜಾ, ಸತಿದೇವಿ, ರಾಘವೇಂದ್ರ ಗಬ್ಬೂರು, ಸುರೇಶ ರಘುನಾಥನಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



