ರಾಯಚೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮಕ್ತಲಪೇಟೆಯ ಕುಂಬಾರ ಓಣಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸ್ವಲ್ಪ ಮಳೆಯಾದರೂ ಮನೆಯೊಳಗೆ ನೀರು ನುಗ್ಗುತ್ತಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕುಂಬಾರ ಓಣಿಯ ಮೂಲಿಮಠದ ಹಿಂಭಾಗದಲ್ಲಿರುವ ಈರಣ್ಣ ದರ್ಜಿ ಎಂಬುವವರ ಮನೆಗೆ ಮಳೆಯಾದಾಗ ಚರಂಡಿ ನೀರು ನುಗ್ಗುತ್ತಿದ್ದು, ಮನೆಯೊಳಗೆ ನಿಲ್ಲಲೂ ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಯ ಪಕ್ಕದ ಚರಂಡಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಸಿಮೆಂಟ್ ಪೈಪ್ ಅಳವಡಿಸಿರುವುದೇ ನೀರು ಸರಾಗವಾಗಿ ಹರಿಯದಿರಲು ಪ್ರಮುಖ ಕಾರಣವಾಗಿದೆ ಎಂದು ಈರಣ್ಣ ದರ್ಜಿ ಆರೋಪಿಸಿದ್ದಾರೆ.
ಮಳೆ ಬಂದಾಗ ಚರಂಡಿ ತುಂಬಿ ಕೊಳಚೆ ನೀರು ಮನೆಯೊಳಗೆ ನುಗ್ಗುವುದರ ಜೊತೆಗೆ ಹಾವು, ಚೇಳು ಸೇರಿದಂತೆ ವಿಷಜಂತುಗಳು ಮನೆ ಪ್ರವೇಶಿಸುತ್ತಿವೆ. ಇದರಿಂದ ಮಕ್ಕಳು ಭಯಗೊಂಡು ಮನೆಯಿಂದ ಹೊರಗೆ ಓಡುವಂತಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಕಳೆದ ಆರು ತಿಂಗಳಿಂದ ಮುಂದುವರಿದಿದ್ದು, ಬಡಾವಣೆಯ ಜನರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರ ಗಮನಕ್ಕೂ ತಂದಿದ್ದಾರೆ. ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೂ ಸಮಸ್ಯೆ ತಿಳಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
‘ಮಹಾನಗರ ಪಾಲಿಕೆಯಾದರೂ ಮೂಲಸೌಕರ್ಯ ಮರೀಚಿಕೆ’
ನಗರವು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದರೂ ಒಳಬಡಾವಣೆಗಳಲ್ಲಿ ಸಮರ್ಪಕ ಚರಂಡಿ, ರಸ್ತೆ ಹಾಗೂ ಸ್ವಚ್ಛತಾ ವ್ಯವಸ್ಥೆ ಇಲ್ಲದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವಲ್ಪ ಮಳೆಯಾದರೂ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗಳು ಮತ್ತು ಮನೆಗಳತ್ತ ಹರಿಯುತ್ತಿದೆ. ಚರಂಡಿಗಳಲ್ಲಿನ ಹೂಳು ಹಾಗೂ ತ್ಯಾಜ್ಯವನ್ನು ನಿಯಮಿತವಾಗಿ ತೆರವುಗೊಳಿಸದಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಬೇಕು. ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ ಎನ್ನಲಾದ ಸಿಮೆಂಟ್ ಪೈಪ್ಗಳನ್ನು ಸರಿಪಡಿಸಿ, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಒಳಬಡಾವಣೆಗಳ ರಸ್ತೆ, ಚರಂಡಿ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
“ನಗರ ಮಹಾನಗರ ಪಾಲಿಕೆಯಾಗಿದೆ ಎಂಬುದು ಹೆಸರಿಗಷ್ಟೇ ಸೀಮಿತವಾಗಬಾರದು. ಅದರ ಸೌಲಭ್ಯಗಳೂ ಜನರಿಗೆ ದೊರೆಯಬೇಕು. ನಾವು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದೇವೆ ಎಂಬ ಭಾವನೆ ಮೂಡುವಂತೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



