ರಾಯಚೂರು, ಸೆ.22: ವಿವಿಧ ಸಂಘ-ಸಂಸ್ಥೆಗಳಲ್ಲಿ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಮೀಸಲಾತಿ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೆ. ಶಾಂತಪ್ಪ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದ ಸಮೀಪದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಮಂಗಳವಾರ ಸವಿತಾ ಸಮಾಜ ನಿವೃತ್ತ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ 7ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ಆಶಯಕ್ಕೆ ಅನುಗುಣವಾಗಿ ಅರ್ಹರಿಗೆ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಸಂಘ-ಸಂಸ್ಥೆಗಳ ಆಡಳಿತದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಹಾಗೂ ಪ್ರಾತಿನಿಧ್ಯ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಾಗಲದಿನ್ನಿ ಶ್ರೀನಿವಾಸ್ ಮಾತನಾಡಿ, ಸವಿತಾ ಸಮಾಜದವರಿಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ನಾಮನಿರ್ದೇಶನದ ಮೂಲಕ ಅವಕಾಶ ಕಲ್ಪಿಸಬೇಕು. ಸಮಾಜದವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ, ಜಮಾ-ಖರ್ಚು, ಲಾಭ-ಹಾನಿ ಹಾಗೂ ಅಢಾವೆ ಪತ್ರಿಕೆಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು. 2026-27ನೇ ಸಾಲಿಗೆ ಲೆಕ್ಕ ಪರಿಶೋಧಕರ ನೇಮಕ, ವಾರ್ಷಿಕ ಅಂದಾಜು ಪತ್ರಿಕೆ ಅನುಮೋದನೆ ಹಾಗೂ ಸಂಘದ ಬೈಲಾದಲ್ಲಿ ಲಾಭಾಂಶ ವಿತರಣೆಗೆ ಸಂಬಂಧಿಸಿದ ತಿದ್ದುಪಡಿಗಳ ಕುರಿತು ಚರ್ಚಿಸಲಾಯಿತು.
2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘದಲ್ಲಿದ್ದ 274 ಸದಸ್ಯತ್ವವನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಸುಸ್ತಿ ಸಾಲಗಾರರಿಂದ ಬಾಕಿ ಸಾಲ ವಸೂಲಿ ಮಾಡಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು.
ಇದೇ ವೇಳೆ ನಿವೃತ್ತರಾದ ಮಂಜುಳಾ, ನಾಗರಾಜ ಹಾಗೂ ಯಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದಿಂದ ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿಸಿದ ಸದಸ್ಯರು, ಪಿಗ್ಮಿ ಖಾತೆದಾರರು, ಮುದ್ದತ್ತು ಠೇವಣಿದಾರರು ಹಾಗೂ ಸಾಲದ ಖಾತೆದಾರರನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.
ಸಂಘದ ಸಿಇಒ ಗಾಯತ್ರಿ, ಮ್ಯಾನೇಜರ್ ಇಂದಿರಾ, ಅಕೌಂಟೆಂಟ್ ಸರಸ್ವತಿ ಹಾಗೂ ಸಿಬ್ಬಂದಿ ಲಕ್ಷ್ಮೀ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದರೆಸಾಬ್ ಸಿತಾರಿ, ವೆಂಕಟಚಲಪತಿ, ನಾಗಲದಿನ್ನಿ ಶ್ರೀನಿವಾಸ್, ಚಂದ್ರಶೇಖರಪ್ಪ, ಕೆ. ಶಾಂತಪ್ಪ, ಮೊಹಮ್ಮದ್ ಸಲಾಂ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಪ್ರಾರ್ಥನೆ, ಮೌನಾಚರಣೆ, ಸ್ವಾಗತ ಭಾಷಣ ಹಾಗೂ ಅಧ್ಯಕ್ಷರ ಭಾಷಣ ನಡೆಯಿತು. ಬಳಿಕ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.



