ರಾಯಚೂರು: ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್ಗಳು, ಲ್ಯಾಬ್ಗಳು ಹಾಗೂ ಇಮೇಜಿಂಗ್ ಸೆಂಟರ್ಗಳ ವಿರುದ್ಧ ಹಿಂದಿನ ಜಿಲ್ಲಾಧಿಕಾರಿಗಳು ವಿಧಿಸಿರುವ ದಂಡವನ್ನು ಕೂಡಲೇ ವಸೂಲಿ ಮಾಡಬೇಕು. ಅಲ್ಲದೆ, ವಿದ್ಯಾರ್ಹತೆಗೆ ವಿರುದ್ಧವಾಗಿ ನಿಯಮಬಾಹಿರ ಕ್ರಾಸ್ ಪ್ರಾಕ್ಟಿಸ್ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಲಿಂಗೇಗೌಡ ಡಿ.ಎಸ್. ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, 2025ರ ಜುಲೈನಲ್ಲಿ ಅಂದಿನ ಜಿಲ್ಲಾಧಿಕಾರಿ ನಿತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವದುರ್ಗ, ಸಿರವಾರ, ಮಾನ್ವಿ, ಲಿಂಗಸೂಗೂರು ಹಾಗೂ ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಕೆಪಿಎಂಇ ಕಾಯ್ದೆ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ಖಾಸಗಿ ಕ್ಲಿನಿಕ್ಗಳು, ಲ್ಯಾಬ್ಗಳು ಮತ್ತು ಇಮೇಜಿಂಗ್ ಸೆಂಟರ್ಗಳ ಕುರಿತು ವಿಚಾರಣೆ ನಡೆಸಿ, ನಿಯಮಾನುಸಾರ ತಲಾ ₹15 ಸಾವಿರದಿಂದ ₹50 ಸಾವಿರದವರೆಗೆ ದಂಡ ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.
ವಿದ್ಯಾರ್ಹತೆಗೆ ಅನುಗುಣವಾಗಿರದ ಚಿಕಿತ್ಸೆ ನೀಡುವುದು ಹಾಗೂ ನಿಯಮಬಾಹಿರವಾಗಿ ಕ್ರಾಸ್ ಪ್ರಾಕ್ಟಿಸ್ ನಡೆಸುವುದನ್ನು ನಿಷೇಧಿಸಿ, ಕೆಪಿಎಂಇ ನೋಂದಣಿ ಪಡೆಯುವವರೆಗೆ ಅಂತಹ ಕ್ಲಿನಿಕ್ಗಳನ್ನು ನಡೆಸಬಾರದು ಎಂದು ಸ್ಪಷ್ಟ ಆದೇಶ ನೀಡಲಾಗಿತ್ತು. ವಿಧಿಸಲಾದ ದಂಡದ ಮೊತ್ತವನ್ನು ಡಿಡಿ ಮೂಲಕ ಕೆಪಿಎಂಇ ಖಾತೆಗೆ ಜಮೆ ಮಾಡುವಂತೆ ಹಾಗೂ ತಾಲೂಕು ಮಟ್ಟದಲ್ಲಿ ನಿರಂತರ ನಿಗಾ ವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಆದೇಶ ಹೊರಬಂದು ಸಾಕಷ್ಟು ಸಮಯ ಕಳೆದಿದ್ದರೂ, ವಿಧಿಸಲಾದ ದಂಡದ ಸಂಪೂರ್ಣ ಮೊತ್ತ ಸರ್ಕಾರದ ಖಾತೆಗೆ ಜಮೆಯಾಗಿದೆಯೇ, ನೋಂದಣಿ ಇಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗಳು ತಮ್ಮ ಚಟುವಟಿಕೆ ನಿಲ್ಲಿಸಿದ್ದವೆಯೇ ಹಾಗೂ ಆದೇಶ ಪಾಲಿಸದವರ ವಿರುದ್ಧ ಎಫ್ಐಆರ್ ಸೇರಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಕುರಿತು ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ರಾಮಲಿಂಗೇಗೌಡ ಆರೋಪಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಿ ಮಾಡಲಾದ ಎಲ್ಲ ಕ್ಲಿನಿಕ್ಗಳು, ಆಸ್ಪತ್ರೆಗಳು, ಲ್ಯಾಬ್ಗಳು ಹಾಗೂ ಇಮೇಜಿಂಗ್ ಸೆಂಟರ್ಗಳಿಂದ ದಂಡ ವಸೂಲಾದ ಕುರಿತು ದಾಖಲೆಗಳನ್ನು ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಇನ್ನೂ ದಂಡ ವಸೂಲಾಗದಿದ್ದಲ್ಲಿ ಬಡ್ಡಿ ಸಹಿತ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅದೇ ರೀತಿ, ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಅಥವಾ ಕ್ರಾಸ್ ಪ್ರಾಕ್ಟಿಸ್ ನಡೆಸುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗದೆ, ಕೆಪಿಎಂಇ ಕಾಯ್ದೆ ಹಾಗೂ ಅನ್ವಯವಾಗುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು. ಆದೇಶ ಜಾರಿಯಲ್ಲಿ ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಲೋಪ ಕಂಡುಬಂದಲ್ಲಿ ಅವರ ಜವಾಬ್ದಾರಿಯನ್ನೂ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೈಗೊಂಡ ಕ್ರಮಗಳು, ವಸೂಲಾದ ದಂಡ ಹಾಗೂ ಬಾಕಿ ಇರುವ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ವಾಸ್ತವ ಸ್ಥಿತಿ ತಿಳಿಸಬೇಕು. ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ವೈಯಕ್ತಿಕ ದ್ವೇಷದಿಂದ ಸಲ್ಲಿಸಿರುವ ಮನವಿಯಲ್ಲ; ಸಾರ್ವಜನಿಕರ ಜೀವ ರಕ್ಷಣೆ, ಆರೋಗ್ಯ ವ್ಯವಸ್ಥೆಯ ಪಾವಿತ್ರ್ಯತೆ ಹಾಗೂ ಕಾನೂನಿನ ಸಮಾನ ಅನುಷ್ಠಾನದ ಹಿತದೃಷ್ಟಿಯಿಂದ ಈ ಬೇಡಿಕೆ ಮುಂದಿಡಲಾಗಿದೆ ಎಂದು ರಾಮಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.
ಮನವಿ ಸ್ವೀಕರಿಸಿದ ದಿನಾಂಕದಿಂದ 21 ದಿನಗಳೊಳಗೆ ಕೈಗೊಂಡ ಕ್ರಮಗಳ ಕುರಿತು ದೂರುದಾರರಿಗೆ ಲಿಖಿತ ಹಿಂಬರಹ ನೀಡುವುದರ ಜೊತೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.



