ರಾಯಚೂರು, ಸೆ.23: ತಾಲೂಕಿನ ಗಿಲ್ಲೆಸೂಗೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಗೆ ಒಂಬತ್ತು ದಿನಗಳ ಕಾಲ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದ ಬಳಿಕ ವಿಜೃಂಭಣೆಯಿಂದ ವಿಸರ್ಜನಾ ಕಾರ್ಯಕ್ರಮ ನಡೆಸಲಾಯಿತು.

ವಿಸರ್ಜನಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿಯ ಪ್ರಸಾದದ 5 ಕೆ.ಜಿ. ಲಡ್ಡುವನ್ನು ಕಂಠಪ್ಪ ನಾಯಕ ಅವರು ₹96,501ಕ್ಕೆ ಪಡೆದುಕೊಂಡರು. ಹಸಿ ತೆಂಗಿನಕಾಯಿ ನುಗ್ಗಲು ಹಂಪಯ್ಯ ಅವರ ಪುತ್ರ ರಮೇಶ್ ಅವರು ₹19,201ಕ್ಕೆ ಹಾಗೂ ಅಂಗವಸ್ತ್ರವನ್ನು ಮದ್ದಿಲಬಂಡ ನರಸಿಂಹ ನಾಯಕ ಅವರು ₹10,501ಕ್ಕೆ ಪಡೆದುಕೊಂಡರು.

ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಮಳೆ ಸುರಿದರೂ ಗ್ರಾಮಸ್ಥರ ಉತ್ಸಾಹ ಕುಗ್ಗಲಿಲ್ಲ. ವರುಣನ ಆರ್ಭಟದ ನಡುವೆಯೂ ಗ್ರಾಮಸ್ಥರು, ರೈತರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣೇಶನಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.

ಮಳೆಯ ನಡುವೆಯೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಿಸ್ತು ಮತ್ತು ಶಾಂತಿಯಿಂದ ವಿಸರ್ಜನಾ ಕಾರ್ಯಕ್ರಮ ನಡೆಸಲು ಸಾರ್ವಜನಿಕರು ಸಹಕರಿಸಿದರು. ಶ್ರೀ ಗಜಾನನ ಯುವಮಂಡಲ ಸಂಘದ ನೇತೃತ್ವದಲ್ಲಿ ಬುಧವಾರ ಮುಂಜಾನೆ ತುಂಗಭದ್ರ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ನೀಲಕಂಠ ನಾಯಕ, ನರೇಶ್ ಗೌಡ, ಶಿವರಾಜ್ ನಾಯಕ, ಮಲ್ಲೇಶ್ ನಾಯಕ, ನಲ್ಲಾರೆಡ್ಡಿ ನಾಯಕ, ಕೋಳೂರು ನರಸಿಂಹ ನಾಯಕ, ಗಿಲ್ಕ ಭೀಮೇಶ್ ನಾಯಕ, ಎನ್. ನರಸಿಂಹ ನಾಯಕ, ಜಗನ್ನಾಥ, ಮಹೇಶ್, ಭೀಮೇಶ್ ಸೇರಿದಂತೆ ಗ್ರಾಮದ ಹಿರಿಯರು, ರೈತರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.