ರಾಯಚೂರು: ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅ.3 ಮತ್ತು 4ರಂದು ಶನಿವಾರ ಹಾಗೂ ಭಾನುವಾರ ಹಮ್ಮಿಕೊಳ್ಳಲಾಗಿರುವ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ‘ಗೋವಿಂದಗಾನ’ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಚಿಂತಕ, ವಾಗ್ಮಿ ಹಾಗೂ ಕನಕಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸ್ವಾಮಿರಾವ್ ಕುಲಕರ್ಣಿ ಕಲಬುರಗಿ ಅವರಿಗೆ ‘ಸಿರಿ ಗೋವಿಂದ ವಿಠ್ಠಲ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಹಾಗೂ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್ ತಿಳಿಸಿದ್ದಾರೆ.

ದಾಸ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಇದುವರೆಗೆ 71 ಕೃತಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಲಿಂಗದಹಳ್ಳಿಯ ರಾಮದಾಸರ ಕೀರ್ತನೆಗಳು, ಬದುಕು, ಸಾಹಿತ್ಯ ಹಾಗೂ ಸಮಗ್ರ ಕೀರ್ತನೆಗಳನ್ನು ಒಳಗೊಂಡ ಅವರ ಕೃತಿಗಳು ದಾಸ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಸಾಹಿತ್ಯ ಮತ್ತು ದಾಸ ಪರಂಪರೆಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನಕಶ್ರೀ ಪ್ರಶಸ್ತಿ, ಮಂತ್ರಾಲಯ ಮಠದ ವಿಜಯೇಂದ್ರ ಪ್ರಶಸ್ತಿ, ಟಿಟಿಡಿಯ ಪುರಂದರ ದಾಸಾನುಗ್ರಹ ಪ್ರಶಸ್ತಿ, ಜಗನ್ನಾಥ ವಿಠ್ಠಲ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ದಾಸ ಸಿರಿ ಪ್ರಶಸ್ತಿ, ಜ್ಞಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಅ.3ರಂದು ನಡೆಯುವ ಗೋವಿಂದಗಾನ ಕಾರ್ಯಕ್ರಮದಲ್ಲಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರಿಗೆ ‘ಸಿರಿ ಗೋವಿಂದ ವಿಠ್ಠಲ’ ಪ್ರಶಸ್ತಿ ಫಲಕ ಹಾಗೂ ಧನ ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ. ರಾಯಚೂರು ಶೇಷಗಿರಿ ದಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.