ರಾಯಚೂರು, ಸೆ.20: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ಮೈ ಭಾರತ್ (MY Bharat), ರಾಯಚೂರು ವತಿಯಿಂದ ನಗರದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿ “ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್” ಸಂಕಲ್ಪ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮಾದಕ ದ್ರವ್ಯ ಹಾಗೂ ವಿವಿಧ ವ್ಯಸನಗಳ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಮತ್ತು ವ್ಯಸನಮುಕ್ತ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ರಾಷ್ಟ್ರವ್ಯಾಪಿ ಯುವ ನೇತೃತ್ವದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸ್ವಯಂಸೇವಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಅಧಿಕಾರಿ ಸ್ವಾತಿ ಗುಗುಲೋತ್, ಮೈ ಭಾರತ್‌ನ ಕಾರ್ಯಚಟುವಟಿಕೆಗಳು ಹಾಗೂ ಸಂಕಲ್ಪ ಅಭಿಯಾನದ ಉದ್ದೇಶಗಳನ್ನು ವಿವರಿಸಿದರು. ಯುವಕರು ಮಾದಕ ವಸ್ತುಗಳಿಗೆ ದೃಢವಾಗಿ ‘ಇಲ್ಲ’ ಎನ್ನಬೇಕು. ವ್ಯಸನದಿಂದ ಹೊರಬರಲು ನೆರವು ಅಗತ್ಯವಿರುವ ಸ್ನೇಹಿತರು ಹಾಗೂ ಪರಿಚಿತರಿಗೆ ಬೆಂಬಲ ನೀಡಬೇಕು. ಕ್ಯಾಂಪಸ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಸನಮುಕ್ತ ಜೀವನದ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿನಿ ಶ್ರೇಯಾ ಚೆರುಕು ಮಾತನಾಡಿ, ಮಾದಕ ವ್ಯಸನವು ಯುವಜನರ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಕುರಿತು ವಿವರಿಸಿದರು. ವ್ಯಸನ ತಡೆಗಟ್ಟುವಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಯುವರಾಜ್ ನಶಾ ಮುಕ್ತ ಪ್ರತಿಜ್ಞೆಯನ್ನು ಬೋಧಿಸಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಇತರರು ಒಟ್ಟಾಗಿ ಪ್ರತಿಜ್ಞೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸಹಿ ಅಭಿಯಾನ ಹಾಗೂ ಘೋಷವಾಕ್ಯ ಬರವಣಿಗೆ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಮೈ ಭಾರತ್ ಕ್ಯಾಂಪಸ್ ಅಂಬಾಸಿಡರ್ ಸೌರಬ್ ಅವರು ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು. ಅಭಿಯಾನಕ್ಕೆ ಬೆಂಬಲ ನೀಡಿ ಉತ್ಸಾಹದಿಂದ ಭಾಗವಹಿಸಿದ ಐಐಐಟಿ ರಾಯಚೂರಿನ ನಿರ್ದೇಶಕರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸ್ವಾತಿ ಗುಗುಲೋತ್ ಧನ್ಯವಾದ ಅರ್ಪಿಸಿದರು.