ಕೃಷ್ಣ: ಗಡಿನಾಡಿನಲ್ಲಿ ತೆಲುಗು ಭಾಷೆಯೊಂದಿಗೆ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಎಂದಿಗೂ ಮರೆಯದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕನ್ನಡ ಮಿತ್ರಕೂಟ ಹಾಗೂ ಗಡಿನಾಡ ಕನ್ನಡ ಸಂಘ ಸದಾ ಬೆನ್ನೆಲುಬಾಗಿ ನಿಲ್ಲಲಿವೆ ಎಂದು ಕನ್ನಡ ಮಿತ್ರಕೂಟ ರಾಯಚೂರು ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಜೈನ್ ಹೇಳಿದರು.

ಕನ್ನಡ ಮಿತ್ರಕೂಟ ರಾಯಚೂರು ಹಾಗೂ ಗಡಿನಾಡ ಕನ್ನಡ ಸಂಘ ಕೃಷ್ಣ ಸಹಯೋಗದಲ್ಲಿ ಜಿಲ್ಲಾ ಪರಿಷತ್ ಪ್ರೌಢಶಾಲೆ ಕೃಷ್ಣ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಇಂದಿನದಲ್ಲ. ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳ ನಡುವೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಕನ್ನಡಿಗರ ಸಮಸ್ಯೆಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಪರಿಹಾರ ದೊರೆಯದಿದ್ದರೆ ರಾಜ್ಯಮಟ್ಟದಲ್ಲಿಯೂ ಹೋರಾಟ ನಡೆಸಲು ಕನ್ನಡ ಮಿತ್ರಕೂಟ ಸಿದ್ಧವಿದೆ. ಗಡಿನಾಡ ಕನ್ನಡಿಗರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಘಟನೆ ನಿರಂತರವಾಗಿ ಶ್ರಮಿಸಲಿದೆ ಎಂದು ಭರವಸೆ ನೀಡಿದರು.

ಗಡಿನಾಡ ಕನ್ನಡ ಸಂಘ ಕೃಷ್ಣ ಉಪಾಧ್ಯಕ್ಷ ಅಮರ್ ಕುಮಾರ್ ದೀಕ್ಷಿತ್ ಮಾತನಾಡಿ, ಗಡಿನಾಡಿನ ಸಮಸ್ಯೆಗಳಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಹಲವು ವರ್ಷಗಳಿಂದ ಹೋರಾಟ ನಡೆಸಿ ಬೇಸತ್ತಿರುವ ಸಂದರ್ಭದಲ್ಲಿ ಕನ್ನಡ ಮಿತ್ರಕೂಟ ನಮ್ಮ ನೆರವಿಗೆ ಬಂದಿರುವುದು ಶ್ಲಾಘನೀಯ ಎಂದರು.

ಗಡಿನಾಡ ಕನ್ನಡ ಸಂಘದ ಗೌರವಾಧ್ಯಕ್ಷ ರಾಮಲಿಂಗಪ್ಪ ಕುಣಿಸಿ ಮಾತನಾಡಿ, ದೀರ್ಘಕಾಲದ ಹೋರಾಟದ ಫಲವಾಗಿ ಬಸ್ ಸೌಲಭ್ಯ ಹಾಗೂ ಶೇ.5ರಷ್ಟು ಮೀಸಲಾತಿ ದೊರೆತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ ಕನ್ನಡ ಪಠ್ಯಪುಸ್ತಕಗಳು ಇನ್ನೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಪುಸ್ತಕಗಳನ್ನು ಒದಗಿಸಲು ಕನ್ನಡ ಮಿತ್ರಕೂಟ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸಲಹಾ ಸಮಿತಿ ಸದಸ್ಯ ಮಲ್ಲನಗೌಡ ಹಿಂದುಪುರ ಮಾತನಾಡಿ, ಗಡಿನಾಡ ಕನ್ನಡಿಗರು ಸುಮ್ಮನೆ ಕುಳಿತರೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದು, ಹೋರಾಟವನ್ನು ನಿರಂತರವಾಗಿ ಮುಂದುವರಿಸಬೇಕು ಎಂದರು.

ಕನ್ನಡ ಮಿತ್ರಕೂಟ ರಾಯಚೂರು ಸಂಸ್ಥಾಪಕ ಬಶೀರ್ ಅಹ್ಮದ್ ಹೊಸಮನಿ ಮಾತನಾಡಿ, ಗಡಿನಾಡ ಕನ್ನಡಿಗರಿಗೆ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ರಾಯಚೂರು ಹಾಗೂ ಕನ್ನಡ ಮಿತ್ರಕೂಟದಲ್ಲಿ ಪದಾಧಿಕಾರಿಗಳ ಸ್ಥಾನ ಕಲ್ಪಿಸಿ, ಕನ್ನಡಪರ ಹೋರಾಟ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪರಿಷತ್ ಪ್ರೌಢಶಾಲೆ ಕೃಷ್ಣ ಮುಖ್ಯಗುರು ಕಿಶೋರ್ ಕುಮಾರ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಪಠ್ಯಪುಸ್ತಕ ಹಾಗೂ ಕನ್ನಡ ಶಿಕ್ಷಕರ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ನೀಡಬೇಕು ಎಂದು ಕೋರಿದರು.

ಮಂಡಲ ಕ್ಷೇತ್ರ ಶಿಕ್ಷಣಾಧಿಕಾರಿ ನಿಜಮುದ್ದೀನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ತಂಗಡಿ ಯುಪಿಎಸ್ ಅನ್ನು ಜೆಡ್‌ಪಿಎಚ್‌ಎಸ್ ಆಗಿ ಉನ್ನತೀಕರಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿವರೆಗೆ ಉನ್ನತೀಕರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಾರ್ಯಕ್ರಮದಲ್ಲಿ 2026ನೇ ಸಾಲಿನ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಾಲಿನಿ, ಗಾಯತ್ರಿ, ಕುಲಸುಂಬಿ, ನಂದಿತಾ, ಪುಟ್ಟಿ ಭಾಗ್ಯಶ್ರೀ, ಸಾಜಿದ, ಆಶಾ ಬಿ., ಜಮುನಾ, ಮಲ್ಲಿಕಾರ್ಜುನ್ ಹಾಗೂ ಲಕ್ಷ್ಮಿ ಸೇರಿದಂತೆ ಒಟ್ಟು 11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಆರಂಭದಲ್ಲಿ ಪ್ರತಿಭಾ ಗೋನಾಳ್ ಹಾಗೂ ವೀರೇಂದ್ರ ಕುರುಡಿ ಅವರಿಂದ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಗಡಿನಾಡ ಕನ್ನಡ ಸಂಘ ಕೃಷ್ಣ ಸಂಸ್ಥಾಪಕ ಅಧ್ಯಕ್ಷ ಗಾರಾ ನರಸಿಂಹ ಶೆಟ್ಟಿ, ಕೃಷ್ಣ ಸರಪಂಚ ಸೋಲಾಪುರ ನಾಗೇಶ್, ರೇಷ್ಮಾ ಕೃಷ್ಣ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಗಡಿನಾಡ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ನಾಗಭೂಷಣ, ಕನ್ನಡ ಮಿತ್ರಕೂಟದ ಪ್ರಧಾನ ಕಾರ್ಯದರ್ಶಿ ರಾಮಣ್ಣ ಮ್ಯಾದರ್, ಶರಣಿಕ್ ಕುಮಾರ್ ಧೋಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಾಗಭೂಷಣ ಸ್ವಾಗತಿಸಿದರು. ಶಿಕ್ಷಕ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಾಹಿಂ ಬೇಗಂ ವಂದಿಸಿದರು.