ರಾಯಚೂರು, ಸೆ.24: ಪತ್ರಕರ್ತರು ದಿನನಿತ್ಯದ ಒತ್ತಡದ ವೃತ್ತಿಜೀವನದ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ ಹೇಳಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇದರೊಂದಿಗೆ ಪತ್ರಕರ್ತರಿಗಾಗಿ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿರುವುದು ಮತ್ತಷ್ಟು ಅರ್ಥಪೂರ್ಣವಾಗಿದೆ ಎಂದರು.
ಪತ್ರಕರ್ತರು ನಿರಂತರವಾಗಿ ಸುದ್ದಿ ಸಂಗ್ರಹ, ವರದಿ, ಸಭೆ-ಸಮಾರಂಭಗಳ ವರದಿ ಹಾಗೂ ವಿವಿಧ ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಾರೆ. ಇಂತಹ ವೃತ್ತಿಪರ ಒತ್ತಡದ ನಡುವೆ ಕ್ರೀಡೆಗೆ ಸಮಯ ಮೀಸಲಿಡುವುದರಿಂದ ದೈಹಿಕ ಚುರುಕುತನದ ಜೊತೆಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂದು ಹೇಳಿದರು.
ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ್ ಮಾತನಾಡಿ, ಕ್ರೀಡೆಯನ್ನು ಕೇವಲ ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸದೆ ಪ್ರತಿದಿನದ ಜೀವನದ ಭಾಗವಾಗಿಸಿಕೊಳ್ಳಬೇಕು. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ. ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಿರುವ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಪ್ರಯತ್ನ ಅಭಿನಂದನೀಯವಾಗಿದ್ದು, ಬೆಳ್ಳಿ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಗಿಲ್ಡ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ವಿವಿಧ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪತ್ರಕರ್ತರ ಕ್ರೀಡಾಕೂಟಕ್ಕೆ ಶಟಲ್ ಬ್ಯಾಡ್ಮಿಂಟನ್ ಮೂಲಕ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಚೆಸ್, ಕೇರಂ ಹಾಗೂ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಕರ್ತರಿಗಾಗಿ ಈಗಾಗಲೇ ಕಥೆ ಮತ್ತು ಕವನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಯ್ಕೆಯಾದ ಕಥೆ-ಕವನಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸಲು ಸಿದ್ಧತೆ ನಡೆದಿದೆ. ಅಲ್ಲದೆ ಛಾಯಾಚಿತ್ರ ಮತ್ತು ವ್ಯಂಗ್ಯಚಿತ್ರ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದ್ದು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳ್ಳಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಮಾಜಿ ಅಧ್ಯಕ್ಷ ಚನ್ನಬಸವಣ್ಣ, ಹಿರಿಯ ಪತ್ರಕರ್ತ ಶಿವಮೂರ್ತಿ ಹಿರೇಮಠ, ಜಗನ್ನಾಥ ಪೂಜಾರಿ, ಮಂಜುನಾಥ ಸಾಲಿ, ಮಹಾನಂದ, ನೀಲಕಂಠಸ್ವಾಮಿ, ಅಣ್ಣಪ್ಪ ಮೇಟಿಗೌಡ, ಗುರುರಾಜ ಕೆ., ಸುರೇಶ್ ಗೌಡ, ಅಮರೇಶ್ ಸಜ್ಜನ, ಖಾಜಾ ಹುಸೇನ್, ದುರ್ಗೇಶ್, ವಾಸು, ಜಯಕುಮಾರ ದೇಸಾಯಿ, ರಾಚಯ್ಯ ಸ್ವಾಮಿ, ಅರುಣ್ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.
ಪಂದ್ಯಗಳ ನಿರ್ಣಾಯಕರಾಗಿ ನಿವೃತ್ತ ಶಿಕ್ಷಕ ಮಲ್ಲಪ್ಪ ಹಾಗೂ ಶಿಕ್ಷಕ ಮಹಮ್ಮದ್ ಖಾಲಿದ್ ಕಾರ್ಯನಿರ್ವಹಿಸಿದರು. ಗಿಲ್ಡ್ ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರ್ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.



