ರಾಯಚೂರು, ಸೆ.24: ಕರ್ನಾಟಕ ರಾಜ್ಯ ಭೋವಿ-ವಡ್ಡರ ಸಮಾಜದ ರಾಯಚೂರು ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಗರದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.

ಸಮಾಜದ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಎಸ್. ಯಲ್ಲಪ್ಪ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಉಮಲೂಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲಾಧ್ಯಕ್ಷರಾಗಿ ಹನುಮಂತ ರೆಡ್ಡಿ ಹಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಿಲ್ಲಾ ಗೌರವಾಧ್ಯಕ್ಷರಾಗಿ ರೆಡ್ಡಪ್ಪ ಗೇಜ್ಜಬಾವಿ ದೇವದುರ್ಗ, ಉಪಾಧ್ಯಕ್ಷರಾಗಿ ಬಸವರಾಜ್ ಜಾಲಹಳ್ಳಿ, ರಮೇಶ್ ಮುಕುಂದ ಸಿಂಧನೂರು, ಆಂಜನೇಯ ಕಲ್ಲೂರು ಹಾಗೂ ಮಹಾದೇವ ಯರಗುಂಟಾ, ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಕವಿತಾಳ, ಖಜಾಂಚಿಯಾಗಿ ವಿ. ಉರಕುಂದ ಮಡಿಪೇಟೆ, ಸಂಘಟನಾ ಕಾರ್ಯದರ್ಶಿಗಳಾಗಿ ಕುಪ್ಪಯ್ಯ ಅಲ್ಕೋಡ್ ಮತ್ತು ವೆಂಕಟೇಶ್ ಕಲ್ಲೂರು ಹಾಗೂ ಕಾರ್ಯದರ್ಶಿಯಾಗಿ ಗೂಳಪ್ಪ ನೀರಮಾನ್ವಿ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಸಮಿತಿಗೆ ಬಸವರಾಜ ನಿಲೋಗಲ್ ಹಾಗೂ ಬಸವರಾಜ್ ಮಸರಕಲ್ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ಮತ್ತು ತಿಪ್ಪೇಶ್ ಲಿಂಗಸುಗೂರು ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಅಶೋಕ್ ಉಮಲೂಟಿ ಸಿಂಧನೂರು ತಾಲೂಕು ಅಧ್ಯಕ್ಷರಾಗಿ, ವಿ. ಮಲ್ಲೇಶ್ ಚಂದ್ರಬಂಡಾ ರಾಯಚೂರು ತಾಲೂಕು ಅಧ್ಯಕ್ಷರಾಗಿ, ಡಬ್ಲ್ಯೂ. ವೀರೇಶ್ ಗಣಗಾಳ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕುಪ್ಪಯ್ಯ ಅರಿಕೇರಾ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದರು.

ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಎಸ್. ಯಲ್ಲಪ್ಪ ಮಾತನಾಡಿ, ನೂತನ ಪದಾಧಿಕಾರಿಗಳು ಗ್ರಾಮ ಮಟ್ಟದವರೆಗೂ ಸಮಿತಿಗಳನ್ನು ರಚಿಸಿ ಸಮಾಜವನ್ನು ಸಂಘಟಿಸಬೇಕು. ಭೋವಿ-ವಡ್ಡರ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಮತ್ತು ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಉಮಲೂಟಿ ಮಾತನಾಡಿ, ರಾಜ್ಯಾದ್ಯಂತ ಸಂಘಟನೆ ವಿಸ್ತರಿಸುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಬಳಿಕ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವಿದೆ ಎಂದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರು, ರಾಜ್ಯ ಖಜಾಂಚಿ ಚಂದ್ರಶೇಖರ ಗೌಸ್‌ನಗರ, ಕಾನೂನು ಸಲಹೆಗಾರ ಶಂಕರಪ್ಪ ಕುರುಬದೊಡ್ಡಿ, ಜಯಶ್ರೀ ಲಿಂಗಸುಗೂರು, ಗೋವಿಂದ, ಸಣ್ಣ ಮಾಣಿಕಪ್ಪ, ಮಹೇಶ್ ಸೇರಿದಂತೆ ಸಮಾಜದ ಮುಖಂಡರು, ವಿವಿಧ ತಾಲೂಕುಗಳ ಪ್ರತಿನಿಧಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.